ದಾವಣಗೆರೆ: ಜಾತಿಗಣತಿ ವರದಿ ಅಸಮರ್ಪಕವಾಗಿದೆ ಎಂದು ಆಕ್ರೋಶ ಹೊರ ಹಾಕಿರುವ ಮಂಡ್ಯ ಶಾಸಕ ರವಿಕುಮಾರ್ ಗಣಿಗ ಜಾತಿಗಣತಿ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಜಾತಿಗಣತಿ ಮಾಡಲು ನಮ್ಮ ಮನೆಗೆ ಯಾರು ಬಂದು ಕೇಳಿಲ್ಲ, ಚನ್ನಗಿರಿ ಶಾಸಕರ ಮನೆಗೂ ಯಾರೂ ಬಂದು ಕೇಳಿಲ್ಲ. ಜಾತಿಗಣತಿ ವರದಿ ಅಸಮರ್ಪಕವಾಗಿದ್ದು, ಅದನ್ನು ತಿರಸ್ಕರಿಸಬೇಕು ಎಂದು ಸಹಿ ಹಾಕಿ ನಮ್ಮ ಸ್ವಾಮೀಜಿ ಕೈಯಲ್ಲಿ ಕೊಟ್ಟಿದ್ದೇವೆ. ಸ್ವಾಮೀಜಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪತ್ರ ಕೊಟ್ಟಿದ್ದಾರೆ. ವರದಿ ಅಸಮರ್ಪಕವಾಗಿದೆ. ಅದನ್ನು ಮತ್ತೆ ಪರಿಶೀಲನೆ ಮಾಡಬೇಕಾಗಿದೆ ಎಂದರು.
ಇನ್ನು ಈ ಹಿಂದೆ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗುತ್ತಾರೆ ಎಂಬ ಬಾಂಬ್ ಸಿಡಿಸಿದ್ದ ವಿಚಾರವಾಗಿ ಮಾತನಾಡಿದ ಅವರು ಬಿಜೆಪಿಯವರು ಶಾಸಕರನ್ನು ಭೇಟಿ ಮಾಡಿದ ಆಡಿಯೋ ವಿಡಿಯೋ ಕೊಡುತ್ತೇನೆ ಎಂದಿದ್ದೆ. ಅದಕ್ಕೆ ನಾನು ಬದ್ಧ, ನಾನು ಹೇಳಿದ ಮಾತಿಗೆ ಈಗಲೂ ಬದ್ಧವಾಗಿದ್ದೇನೆ. ಬಿಜೆಪಿಯವರೇ ಒಪ್ಪಿಕೊಂಡಿದ್ದರಿಂದ ಅದನ್ನು ಬಿಟ್ಟಿಲ್ಲ. ನಾನು ಮೂರು ಜನರ ಹೆಸರು ಹೇಳಿದ್ದೆ ಮೂವರಲ್ಲಿ ಇನ್ನೂ ಇಬ್ಬರು ಮಾತನಾಡಿಲ್ಲ. ರಮೇಶ್ ಜಾರಕಿಹೋಳಿ ಒಬ್ಬರು ಮಾತ್ರ ಈ ಬಗ್ಗೆ ಮಾತನಾಡಿದ್ದಾರೆ. ಶಾಸಕರಿಗೆ ಅನುದಾನ ಬರುತ್ತಿಲ್ಲ, ಬಾ ಎಂದು ಮಾತನಾಡಿ ಕರೆದಿದ್ದಾರೆ. ಅದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದರು.
ಹೈಕಮಾಂಡ್ನವರು ಮಾತನಾಡ್ಬೇಡಿ ಎಂದಿದ್ದಾರೆ- ಶಿವಗಂಗಾ ಬಸವರಾಜ್: ನಮ್ಮ ಕ್ಷೇತ್ರಗಳಿಗೆ ಅನುದಾನ ಬರುತ್ತಿದೆ. ಸರ್ಕಾರ ಸುದೀರ್ಘ ಆಡಳಿತ ನೀಡಲಿದೆ. ಸಿಎಂ ಬದಲಾವಣೆ ಬಗ್ಗೆ ಮಾತನಾಡಬೇಡಿ ಎಂದು ನಮ್ಮ ಹೈಕಮಾಂಡ್ ತಾಕೀತು ಮಾಡಿದೆ. ಎಲ್ಲವೂ ಮುಗಿದು ಹೋಗಿದೆ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ತಿಳಿಸಿದರು.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನಕ್ಕೆ ನಾನು ಆಕಾಂಕ್ಷಿ ಅಲ್ವೇ ಅಲ್ಲ. ಮೂರ್ನಾಲ್ಕು ಬಾರಿ ಗೆದ್ದಂತ ಶಾಸಕರಿಗೆ ಕೊಡಲಿ ಎಂದು ನಾನು ಆಶಿಸುತ್ತೇನೆ. ಹಳೇ ಬೇರು ಹೊಸ ಚಿಗುರು ಎಂಬಂತೆ ಸಚಿವ ಸ್ಥಾನ ಕೊಡಬಹುದು. ಜಾತಿಗಣತಿ ಸರಿ ಇಲ್ಲ ಎಂದು ಈಗಾಗಲೇ ಮಂಡ್ಯ ಶಾಸಕರು ಹೇಳಿದ್ದಾರೆ. ಯಾರನ್ನು ಭೇಟಿ ಮಾಡದೇ ಗಣತಿ ಮಾಡಿದ್ದಾರೆ. ಇದನ್ನು ಹೊಸದಾಗಿ ಮಾಡಬೇಕು ಎಂದು ನಮ್ಮ ಒತ್ತಾಯ ಇದೆ ಎಂದರು.
ಇದನ್ನೂ ಓದಿ: ಜಾತಿಗಣತಿ ವರದಿ ಕೈ ಸೇರಿದ ಬಳಿಕ ಸೂಕ್ತ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ