ದಾವಣಗೆರೆ: ವಾಹನ ತಪಾಸಣೆ ವೇಳೆ ಕಾರು ಹರಿದ ಪರಿಣಾಮ ಆರ್ಟಿಒ ವಾಹನ ಚಾಲಕ ಮೃತಪಟ್ಟ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.
ದಾವಣಗೆರೆ ಸಮೀಪದ ಮಳಲ್ಕೆರೆ ಗ್ರಾಮದ ಅಜ್ಜಪ್ಪ ಸಾವನ್ನಪ್ಪಿದ ಆರ್ಟಿಒ ವಾಹನ ಚಾಲಕ ಎಂದು ಗುರುತಿಸಲಾಗಿದೆ.
ದೊಣ್ಣೆಹಳ್ಳಿ ಬಳಿ ಲಾರಿಗಳ ದಾಖಲೆಯನ್ನು ಆರ್ಟಿಒ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದರು. ಈ ವೇಳೆ ಚಿತ್ರದುರ್ಗ ಕಡೆಯಿಂದ ಬಂದ ಕಾರು, ಚಾಲಕನ ನಿಯಂತ್ರಣ ತಪ್ಪಿ ಆರ್ಟಿಒ ವಾಹನ ಚಾಲಕನ ಮೇಲೆ ಹರಿದಿದ್ದು ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಕಾರು ಚಾಲಕನನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಕಳೆದ ಮೂರು ದಿನಗಳ ಹಿಂದಷ್ಟೇ ಎರಡು ಲಾರಿಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸಜೀವ ದಹನವಾದ ಹಿನ್ನೆಲೆ ಆರ್ಟಿಒ ಅಧಿಕಾರಿಗಳು ತಪಾಸಣೆ ಬಿಗಿಗೊಳಿಸಿದ್ದರು. ಆದರೆ, ಅಷ್ಟರಲ್ಲೇ ಈ ದುರ್ಘಟನೆ ನಡೆದಿದೆ.