ದಾವಣಗೆರೆ: ಕೊರೊನಾದಿಂದ ಸಂಕಷ್ಟಕ್ಕೀಡಾಗಿದ್ದ ಬೆಣ್ಣೆನಗರಿ ದಾವಣಗೆರೆಯ ಆಟೋ ಚಾಲಕರ ನೆರವಿಗೆಂದು ವ್ಯಕ್ತಿಯೊಬ್ಬರು ಆಗಮಿಸಿದ್ದು, ಸುಮಾರು ಐದು ಸಾವಿರಕ್ಕಿಂತ ಹೆಚ್ಚು ಆಟೋಗಳನ್ನು ದತ್ತು ಪಡೆದುಕೊಂಡಿದ್ದಾರೆ.
ಎರಡು ವರ್ಷಗಳಿಂದ ಪದೇ ಪದೇ ಲಾಕ್ಡೌನ್ ಆಗಿದ್ದರಿಂದ ಮಾಸಿಕ ಕಂತು, ಗಾಡಿ ರಿಪೇರಿ ಮಾಡಿಸಲು ತೊಂದರೆಗೊಳಗಾಗಿದ್ದ ಆಟೋ ಚಾಲಕರ ನೆರವಿಗೆ ಗ್ರಾನೆಟ್ ಉದ್ಯಮಿ ಶ್ರೀಧರ್ ಪಾಟೀಲ್ ಧಾವಿಸಿದ್ದಾರೆ. ಮೂಲತಃ ದಾವಣಗೆರೆ ನಿವಾಸಿಯಾಗಿರುವ ಶ್ರೀಧರ್ ಪಾಟೀಲ್ ಗ್ರಾನೆಟ್ ಉದ್ಯಮದಿಂದ ಆರ್ಥಿಕವಾಗಿ ಸದೃಢರಾಗಿದ್ದಾರೆ. ಕೋವಿಡ್ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ತಮ್ಮಿಂದ ಏನಾದ್ರು ಸಹಾಯ ಮಾಡಬೇಕೆಂದು ಮುಂದೆ ಬಂದಿರುವ ಅವರು ಹಂತ ಹಂತವಾಗಿ ಐದು ಸಾವಿರಕ್ಕಿಂತ ಹೆಚ್ಚು ಆಟೋಗಳನ್ನು ದತ್ತು ಪಡೆದು ಅದರ ಖರ್ಚು ವೆಚ್ಚವನ್ನು ಭರಿಸಲು ಮುಂದಾಗಿದ್ದಾರೆ.
ಶ್ರೀಧರ್ ಅವರು ತಮ್ಮದೆ ಗ್ರಾನೆಟ್ ಅಂಗಡಿಯ ಬಳಿಯೇ ಗ್ಯಾರೇಜ್ ಮಾಡಿಕೊಂಡು ಪ್ರತಿನಿತ್ಯ 25 ಆಟೋಗಳಿಗೆ ಸರ್ವಿಸ್ ಮಾಡಿಸಲು ವ್ಯವಸ್ಥೆ ಕಲ್ಪಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚು ಆಟೋಗಳನ್ನು ದತ್ತು ತೆಗೆದುಕೊಂಡು ಸಮಾಜ ಸೇವೆ ಮಾಡಲು ಟೊಂಕಕಟ್ಟಿ ನಿಂತಿದ್ದಾರೆ.
ಇನ್ನು ಶ್ರೀಧರ್ ಪಾಟೀಲ್ ಅವರ ಕಾರ್ಯಕ್ಕೆ ಬಡ ಆಟೋ ಚಾಲಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಕೋವಿಡ್ ಸಂಕಷ್ಟ ಕಾಲದಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದು, ಸಾವಿರಾರು ಕುಟುಂಬಗಳಿಗೆ ಆಸರೆಯಾದಂತಾಗಿದೆ.