ದಾವಣಗೆರೆ: ಗ್ರಾಮಕ್ಕೆ ಮೂಲ ಸೌಲಭ್ಯಗಳಿಲ್ಲದ್ದರಿಂದ ಮದುವೆಯಾಗಲ್ಲ ಎಂದು ಹಠ ಹಿಡಿದಿದ್ದ ರಾಂಪುರ ಗ್ರಾಮದ ಯುವತಿಗೆ ಬೇಡಿಕೆ ಕೊನೆಗೂ ಒಂದೊಂದಾಗಿಯೇ ಈಡೇರಿಕೆಯಾಗುತ್ತಿದೆ. ಇದೀಗ ಈ ಗ್ರಾಮಕ್ಕೆ ರಸ್ತೆ ಸೇರಿದ್ದಂತೆ ಬಸ್ ಕೂಡ ಬಂದಿದೆ.
ಇದನ್ನು ಓದಿ: ರಸ್ತೆಯಾಗದಿದ್ರೆ ಮದ್ವೆಯಾಗಲ್ಲ ಎಂದಿದ್ದ ಯುವತಿಗೆ ಖುಷಿ; ರಾಂಪುರ ರಸ್ತೆ ಕಾಮಗಾರಿ ಕೊನೆಗೂ ಆರಂಭ-ಈಟಿವಿ ಭಾರತ ಇಂಪ್ಯಾಕ್ಟ್
ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯ ರಾಂಪುರ ಗ್ರಾಮದ ಶಿಕ್ಷಕಿ ಬಿಂದು ಗ್ರಾಮದಲ್ಲಿ ಮೂಲ ಸೌಲಭ್ಯಗಳಿಲ್ಲದ್ದರಿಂದ ಮದುವೆಯಾಗಲ್ಲ ಎಂದು ಶಪಥ ಮಾಡಿದ್ದನ್ನು ಈಟಿವಿ ಭಾರತ ಸುದ್ದಿ ಪ್ರಕಟಿಸಿತ್ತು. ವರದಿ ಗಮನಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈಟಿವಿ ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದರು.
ಬಳಿಕ ಮೂಲ ಸೌಲಭ್ಯಗಳನ್ನು ನೀಡುತ್ತೇವೆ ಎಂದು ಗ್ರಾಮಸ್ಥರಿಗೆ ಭರವಸೆಯನ್ನೂ ನೀಡಿದ್ದರು. ಇದೀಗ ಕೊಟ್ಟ ಮಾತಿನಂತೆ ಗ್ರಾಮಕ್ಕೆ ರಸ್ತೆ ದುರಸ್ತಿಯಾಗಿದ್ದು, ಅದಕ್ಕೆ ಡಾಂಬರ್ ಆಗಬೇಕಿದೆ. ಜೊತೆಗೆ ಕೆಎಸ್ಆರ್ಟಿಸಿ ಬಸ್ ಸಹ ಗ್ರಾಮಕ್ಕೆ ಸಂಚರಿಸುತ್ತಿದೆ.
ಇದನ್ನು ಓದಿ: 'ನಾವು ರಸ್ತೆನೂ ಮಾಡಿಸ್ತೀವಿ, ಆಕೆಯ ಲಗ್ನನೂ ಮಾಡಿಸ್ತೀವಿ': ರಸ್ತೆಯಾಗದೆ ಮದ್ವೆಯಾಗಲ್ಲ ಎಂದ ಯುವತಿಗೆ ದಾವಣಗೆರೆ ಡಿಸಿ ಭರವಸೆ
ಜಿಲ್ಲಾಧಿಕಾರಿ ಅವರು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಗ್ರಾಮಕ್ಕೆ ಬಸ್ ಸಂಚಾರವನ್ನು ಕಳೆದ ಕೆಲ ದಿನಗಳ ಹಿಂದೆ ಆರಂಭಿಸಿದ್ದು, ಗ್ರಾಮಕ್ಕೆ ಆಗಮಿಸಿದ ಬಸ್ಗೆ ಮಹಿಳೆಯರು ಪೂಜೆ ಸಲ್ಲಿಸಿ ಬರಮಾಡಿಕೊಂಡರು.
ಇದನ್ನು ಓದಿ: ಸೂಕ್ತ ರಸ್ತೆ ಆಗೋವರೆಗೂ ಮದುವೆ ಆಗೋದಿಲ್ಲ: ಪಿಎಂ, ಸಿಎಂಗೆ ಪತ್ರ ಬರೆದು ಬೆಣ್ಣೆನಗರಿ ಯುವತಿ ಶಪಥ
ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಮೂರು ವೇಳೆ ರಾಂಪುರ ಗ್ರಾಮದಿಂದ ಜಿಲ್ಲಾ ಕೇಂದ್ರವಾದ ದಾವಣಗೆರೆಗೆ ಬಸ್ ಸಂಚಾರ ಶುರುವಾಗಿದೆ. ನಿಜಕ್ಕೂ ದಿಟ್ಟತನದಿಂದ ಪಿಎಂ ಹಾಗೂ ಸಿಎಂಗೆ ಪತ್ರ ಬರೆದ ಬಿಂದು ಗ್ರಾಮದ ಸಮಸ್ಯೆ ಬಗೆ ಹರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಂದು ಪತ್ರದಿಂದಾಗಿ ಇಂದು ಗ್ರಾಮಕ್ಕೆ ಬಸ್ ವ್ಯವಸ್ಥೆ ಲಭ್ಯವಾಗಿದ್ದು ಸಂತಸದ ವಿಚಾರವಾಗಿದೆ. ಯುವತಿ ಹೋರಾಟಕ್ಕೆ ಜಿಲ್ಲಾಡಳಿತದಿಂದ ಉತ್ತಮ ಸ್ಪಂದನೆ ದೊರೆತಿರುವುದು ಗ್ರಾಮಸ್ಥರ ಖುಷಿಗೂ ಕಾರಣವಾಗಿದೆ.