ದಾವಣಗೆರೆ : ನಾವು ಮೋದಿಯವರ ಹೆಸರು ಹೇಳಿಕೊಂಡು ಚುನಾವಣೆಯಲ್ಲಿ ಮತ ಕೇಳುತ್ತೇವೆ. ಆದರೆ, ಕಾಂಗ್ರೆಸ್ ಪಕ್ಷದವರು ತಬ್ಬಲಿ ಮಕ್ಕಳು. ಅವರು ಯಾವ ನಾಯಕನ ಹೆಸರು ಹೇಳಿಕೊಂಡು ಮತ ಕೇಳ್ತಾರೆ ಎಂದು ಮಾಜಿ ಸಿಎಂ ಬಿಎಸ್ವೈ ವ್ಯಂಗ್ಯವಾಡಿದ್ದಾರೆ. ದಾವಣಗೆರೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ನಮ್ಮ ಪಕ್ಷ, ಸರ್ಕಾರದ ಬಗ್ಗೆ ಇಲ್ಲಸಲ್ಲದ ಹೇಳಿಕೆಯನ್ನು ಕೊಡ್ತಾರೆ ಎಂದರು.
ಸಿದ್ದರಾಮಯ್ಯ, ಡಿಕೆಶಿ ಅವರೇ ನಿಮಗೆ ಕರೆ ಕೊಡ್ತೀನಿ. ಪಕ್ಷವನ್ನು ಬಲಪಡಿಸಲು ನಾನು ಪ್ರತಿ ಜಿಲ್ಲೆಗೆ ತೆರಳಲಿದ್ದೇನೆ. ರಾಜ್ಯದಲ್ಲಿ150 ಕ್ಷೇತ್ರ ಗೆದ್ದು ತೋರಿಸುತ್ತೇವೆ ಎಂದು ಸವಾಲು ಹಾಕಿದರು. ಇನ್ನು ಚುನಾವಣೆಗೆ ಒಂದು ವರ್ಷ ಇದೆ ಎಂದು ಮೈಮರೆಯಬೇಡಿ. ಕಾಂಗ್ರೆಸ್ ಪಕ್ಷದವರು ಹಣ, ಹೆಂಡದ ಬಲ ಹಾಗೂ ಜಾತಿಯ ವಿಷ ಬೀಜ ಬಿತ್ತಿ ಚುನಾವಣೆಯನ್ನು ಮಾಡ್ತಿದ್ದರು. ಆದರೆ, ಅದು ಇದೀಗ ಬದಲಾಗಿದೆ. ಮತದಾರ ಬುದ್ಧಿವಂತನಾಗಿದ್ದಾನೆ ಎಂದು ಕರೆ ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆ ಬಳಿಕ ಉಸಿರಾಟ ನಿಲ್ಲಿಸುತ್ತೆ
ಸರ್ಕಾರ ಹಾಗೂ ಪಕ್ಷದ ಬಗ್ಗೆ ಕಾಂಗ್ರೆಸ್ ನಾಯಕರು ಹಗುರವಾಗಿ ಮಾತನಾಡುತ್ತಿದ್ದಾರೆ. ದುರಾದೃಷ್ಟವಂದ್ರೆ ರಾಜ್ಯದಲ್ಲಿ ಅವರ ಪಕ್ಷ ಸ್ವಲ್ಪ ಮಟ್ಟಿಗೆ ಉಸಿರಾಡುತ್ತಿದೆ. ಚುನಾವಣೆ ಬಳಿಕ ಅದರ ಉಸಿರಾಟ ನಿಲ್ಲುತ್ತೆ. ನಾನು ದುರಂಹಕಾರದಿಂದ ಈ ಮಾತು ಹೇಳ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆ ಸೇರುತ್ತೇನೆ ಎಂದು ಕೆಲವರು ಅಂದುಕೊಂಡಿದ್ದರು. ಆದರೆ, ಅದು ಆಗುವುದಿಲ್ಲ. ಇನ್ಮುಂದೆ ನಾನು ಮನೆ ಸೇರುವುದಿಲ್ಲ. ಮನೆಯಲ್ಲಿ ಹೋಗಿ ಮಲಗುವುದಿಲ್ಲ, ಸುಮ್ಮನೆ ಕೂರಲ್ಲ, ನನ್ನ ಸಂಕಲ್ಪ ರಾಜ್ಯದಲ್ಲಿ 150 ಸ್ಥಾನ ಗೆಲ್ಲುವುದು. ಅಲ್ಲಿಯ ತನಕ ವಿಶ್ರಾಂತಿಸುವುದಿಲ್ಲ ಎಂದರು.
ಯುಪಿಯಲ್ಲಿ ಸ್ಪರ್ಧೆ ಮಾಡಿದ್ದು 377 ಕ್ಷೇತ್ರಕ್ಕೆ, ಗೆದ್ದಿದ್ದು ಎರಡೇ ಸ್ಥಾನ
ಯುಪಿ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ 377 ಕ್ಷೇತ್ರಕ್ಕೆ ಸ್ಪರ್ಧೆ ಮಾಡಲಾಗಿತ್ತು. 375 ಕ್ಷೇತ್ರದಲ್ಲಿ ಅವರು ಠೇವಣಿ ಕಳೆದುಕೊಂಡರು. ಗೆದ್ದವರು ಇಬ್ಬರು ಮಾತ್ರ, ಇದು ಕಾಂಗ್ರೆಸ್ ಸ್ಥಿತಿ ಎಲ್ಲಿದೆ ಎಂಬುವುದನ್ನು ತಿಳಿಸುತ್ತದೆ. ಚುನಾವಣೆ ಬಳಿಕ ಕಾಂಗ್ರೆಸ್ ಮಾಯವಾಗಲಿದೆ ಎಂದು ಮಾಜಿ ಸಿಎಂ ಬಿಎಸ್ವೈ ನಿರಂತರವಾಗಿ ವಾಗ್ದಾಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಓದಿ: ರಾಜಧಾನಿಯ ನಾಲ್ಕು ದಿಕ್ಕಿನಲ್ಲಿ ತಾಯಿ-ಮಗುವಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ : ಡಾ. ಕೆ. ಸುಧಾಕರ್