ದಾವಣಗೆರೆ: ಆಸ್ತಿ ವಿಚಾರವಾಗಿ ಅಕ್ಕನನ್ನೇ ತಮ್ಮ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗುಳ್ಳೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಆಸ್ತಿ ವಿಚಾರವಾಗಿ ಅಕ್ಕ-ತಮ್ಮನ ನಡುವೆ ಜಗಳ ನಡೆದಿದೆ. ಈ ವೇಳೆ ಪ್ರಭಾಕರ ತನ್ನ ಮಕ್ಕಳ ಜೊತೆ ಸೇರಿಕೊಂಡು ತನ್ನ ಅಕ್ಕಮ್ಮ ಎಂಬ ಅಕ್ಕನನ್ನ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರ ಪ್ರಭಾಕರ, ಆತನ ಪುತ್ರ ದಿಲೀಪ್ ಹಾಗೂ ಪುತ್ರಿ ತ್ರಿವೇಣಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮೃತ ಅಕ್ಕಮ್ಮರ ಪುತ್ರ ಸುಂದ್ರೇಶ್ ಮಾತನಾಡಿ, ಅಕ್ಕಮ್ಮ ಹಾಗೂ ಪ್ರಭಾಕರ್ ನಡುವೆ 16 ವರ್ಷಗಳಿಂದ ಆಸ್ತಿಗಾಗಿ ಜಗಳ ನಡೆಯುತ್ತಿತ್ತು. ಈ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ಕಮ್ಮ ಮತ್ತು ಪ್ರಭಾಕರ್ ನಡುವೆ ವ್ಯಾಜ್ಯ ಕೋರ್ಟ್‌ನಲ್ಲಿತ್ತು. ಅಕ್ಕಮ್ಮ ಕೋರ್ಟ್ನ ಅನುಮತಿ ಪಡೆದು ಜಮೀನು ಅಳತೆ ಮಾಡಲು ಸರ್ವೇಯರ್ ಜೊತೆ ಜಮೀನಿಗೆ ಆಗಮಿಸಿದ್ದರು. ಸರ್ವೇಯರ್ ಜಮೀನು ಅಳತೆ ಮಾಡಲು ಮುಂದಾದಾಗ ನಮ್ಮ ಜಮೀನು ಅಳತೆ ಮಾಡಲು ನೀವು ಯಾರು ಅಂತಾ ಪ್ರಭಾಕರ್ ಪುತ್ರ ದಿಲೀಪ್, ಪುತ್ರಿ ತ್ರಿವೇಣಿ ಪ್ರಶ್ನಿಸಿದ್ದಾರೆ. ನಂತರ ಪ್ರಭಾಕರ್ ನನ್ನ ತಾಯಿಯನ್ನು ಕೊಲೆ ಮಾಡಿದ್ದಾರೆ ಎಂದರು.
ಗ್ರಾಮಸ್ಥ ಶಶಿಧರ್ ಮಾತನಾಡಿ, ಆಸ್ತಿಗಾಗಿ ಜಗಳ ಆಗಿದೆ, ಜಮೀನು ಅಳತೆ ಮಾಡಲು ಆಗಮಿಸಿದ್ದ ಸರ್ವೇಯರ್ ಮುಂದೆಯೇ ತಮ್ಮ, ಅಕ್ಕನ ಮೇಲೆ ಹಲ್ಲೆ ನಡೆಸಿದ್ದಾನೆ, ಜಮೀನು ವ್ಯಾಜ್ಯ ಕೋರ್ಟ್ ನಲ್ಲಿದ್ದು ಆಸ್ತಿ ವಿಷಯಕ್ಕೆ ಕೊಲೆಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಗಂಗಾವತಿಯಲ್ಲಿ ಹನಿಟ್ರ್ಯಾಪ್ಗೆ ಒಪ್ಪದ ಮಂಗಳಮುಖಿಯರ ಮೇಲೆ ಹಲ್ಲೆ
ಗ್ರಾನೈಟ್ ಅಂಗಡಿ ಮಾಲೀಕನನ್ನು ಕೊಚ್ಚಿ ಕೊಂದಿದ್ದ ದುಷ್ಕರ್ಮಿಗಳು: ಇನ್ನೊಂದೆಡೆ, ವ್ಯವಹಾರದ ಹಿನ್ನೆಲೆ ಗ್ರಾನೈಟ್ ಅಂಗಡಿ ಮಾಲೀಕನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತುಮಕೂರು ಹೊರವಲಯದಲ್ಲಿರುವ ಯಲ್ಲಾಪುರದ ಅಂಗಡಿಯಲ್ಲಿ ನಡೆದಿತ್ತು. ಚಿಕ್ಕಮಗಳೂರು ಮೂಲದ ಜಾಕೀರ್ ಇಸ್ಮಾಯಿಲ್ (36) ಕೊಲೆಯಾದ ವ್ಯಕ್ತಿ. ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು. ಇಬ್ಬರು ಮಕ್ಕಳೊಂದಿಗೆ ಯಲ್ಲಾಪುರದ ಗಣೇಶ ದೇವಸ್ಥಾನದ ಬಳಿ ಜಾಕೀರ್ ವಾಸವಿದ್ದರು. ನೂತನ ಗ್ರಾನೈಟ್ ಅಂಗಡಿಯನ್ನ ಜಾಕೀರ್ 2 ತಿಂಗಳ ಹಿಂದೆ ಯಲ್ಲಾಪುರದಲ್ಲಿ ತೆರೆದಿದ್ದರು.
ಅಂಗಡಿಯಲ್ಲಿ ಕಾರ್ಯನಿರ್ವಹಿಸುವ ವೇಳೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಜಾಕೀರ್ ಸಹಾಯಕ ಖಾದರ್ ಎಂಬಾತನನ್ನು ವಶಕ್ಕೆ ಪಡೆದಿದ್ದರು. ಘಟನೆಯ ಬಗ್ಗೆ ಸಹೋದರ ಮೊಹಮ್ಮದ್ ಇರ್ಷಾದ್ ಅವರು ಪ್ರತಿಕ್ರಿಯಿಸಿ, ತುಮಕೂರು ಹೊರವಲಯದಲ್ಲಿ ನನ್ನ ಚಿಕ್ಕಮ್ಮನ ಮಗನ ಕೊಲೆ ಆಗಿದೆ. ಇಸ್ಲಾಯಿಲ್ ಜಾಕೀರ್ ಎಂಬುವವರು ಮೂಲತಃ ಚಿಕ್ಕಮಗಳೂರಿನವರು. ಇಲ್ಲಿಯೇ ಗ್ರಾನೈಟ್ ಅಂಗಡಿ ಮಾಡಿಕೊಂಡು ಒಂದು ವರ್ಷದಿಂದ ಇಲ್ಲಿಯೇ ವಾಸವಿದ್ದಾರೆ. ಯಾವುದೇ ರೀತಿಯ ಗಲಭೆ ಇಲ್ಲದೆ ಬದುಕು ನಡೆಸುತ್ತಿದ್ದರು. ಧಾರ್ಮಿಕ ಆಚರಣೆಯನ್ನು ಮಾಡಿಕೊಂಡು ಬದುಕುತ್ತಿದ್ದರು. ಅವರ ಫ್ಯಾಮಿಲಿಯೂ ಕೂಡಾ ಮೂರು ತಿಂಗಳ ಹಿಂದೆ ಶಿಫ್ಟ್ ಆಗಿತ್ತು ಎಂದು ತಿಳಿಸಿದ್ದರು.