ದಾವಣಗೆರೆ: ಕೃಷ್ಣ ಮೃಗದ ಚರ್ಮ ಹಾಗೂ ಕೊಂಬು ಮಾರಾಟಕ್ಕೆ ಯತ್ನಿಸುತ್ತಿದ್ದ ಓರ್ವನನ್ನು ಸ್ವತ್ತು ಸಮೇತ ಬಂಧಿಸಲಾಗಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ದಮ್ಮೂರು ಗ್ರಾಮದ ಮಲ್ಲಪ್ಪ ಮಾಂಡಾಲಿ (40) ಬಂಧಿತ ಆರೋಪಿ.
ಈ ಸಂಬಂಧ ಚನ್ನಗಿರಿ ಪೊಲೀಸ್ ಹಾಗೂ ಅರಣ್ಯ ಸಂಚಾರಿ ದಳ ಆರೋಪಿ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ. ಚನ್ನಗಿರಿ ಪೊಲೀಸ್ ಹಾಗೂ ಅರಣ್ಯ ಸಂಚಾರಿ ದಳದ ಸರಹದ್ದಿನ ವ್ಯಾಪ್ತಿಯಲ್ಲಿ ಬರುವ ಗರಗ ಕ್ರಾಸ್ ಬಳಿಯ ನಂದಿ ಹೋಟೆಲ್ ಬಳಿ ಗುರುವಾರ ಮಲ್ಲಪ್ಪ ಮಾಂಡಾಲಿ ಯಾವುದೇ ಪರವಾನಿಗೆ ಇಲ್ಲದೇ ಕೃಷ್ಣ ಮೃಗದ ಚರ್ಮ ಹಾಗೂ 2 ಕೊಂಬುಗಳನ್ನು ಮಾರಾಟ ಮಾಡುತ್ತಿದ್ದ. ಈ ವೇಳೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಬಂಧಿತ ಆರೋಪಿಯಿಂದ ಅಕ್ರಮವಾಗಿ ಮಾರಾಟ ಮಾಡಲು ತಂದಿದ್ದ ಕೃಷ್ಣ ಮೃಗದ 2 ಕೊಂಬುಗಳು ಹಾಗೂ ಚರ್ಮವನ್ನು ಜಪ್ತಿ ಮಾಡಲಾಗಿದೆ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ಚನ್ನಗಿರಿ ಎಫ್‌ಎಂಎಸ್ ಪೊಲೀಸ್ ಇನ್ಸ್ಪೆಕ್ಟರ್ ಎಂ.ವಿ. ಮೇಘರಾಜ ನೇತೃತ್ವದಲ್ಲಿ ಸಿಬ್ಬಂದಿ ಟಿ.ಸಿ. ಪ್ರಕಾಶ, ರವಿಕುಮಾರ, ರಾಘವೇಂದ್ರ, ಶಿವಲಿಂಗ ಹಾಗೂ ರಿಜ್ವಾನ್ ಅಹಮ್ಮದ್ ಗುಬ್ಬಿ ಭಾಗಿಯಾಗಿದ್ದರು.
ಜಿಂಕೆ ಕೊಂಬು ಸಾಗಣೆ: ನಾಲ್ವರ ಬಂಧನ: ಇತ್ತೀಚೆಗೆ ಜಿಂಕೆ ಕೊಂಬು ಸಾಗಣೆ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿರುವ ಘಟನೆ ಅಂಕೋಲಾದ ಮಾಸ್ತಿಕಟ್ಟಾ ಹೆದ್ದಾರಿಯಲ್ಲಿ ನಡೆದಿತ್ತು. ಹಳಿಯಾಳದ ಶೌಕತ್ ಸಾಬ್, ಕಲ್ಲೇಶ್ವರ ಗ್ರಾಮದ ಪ್ರಸಾದ ದೇಸಾಯಿ, ಸೂರಜ್ ಭಂಡಾರಿ, ಸಂದೀಪ ಭಂಡಾರಿ, ಬಂಧಿತ ಆರೋಪಿಗಳು. ಎರಡು ಜಿಂಕೆ ಕೊಂಬುಗಳನ್ನು ಕಾರಿನಲ್ಲಿ ಸಾಗಣೆ ಮಾಡುತ್ತಿದ್ದಾಗ ಅಂಕೋಲಾದ ಮಾಸ್ತಿಕಟ್ಟಾ ಬಳಿ ಹೆದ್ದಾರಿಯಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ತಪಾಸಣೆ ನಡೆಸಿದ ಪೊಲೀಸರು ಕೊಂಬು ಸಹಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಕಾರವಾರ - ಜಿಂಕೆ ಕೊಂಬು ಸಾಗಣೆ: ನಾಲ್ವರ ಬಂಧನ
ಕಡವೆ ಕೊಂಬು, ನಾಟ ಸಾಗಣೆ: ಬಾಳೆಗೊನೆ ಜತೆ ನಾಲ್ಕು ಕಡವೆ ಕೊಂಬು ಹಾಗೂ ಕಟ್ಟಿಗೆ ನಾಟ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುಮಟಾ ತಾಲೂಕಿನ ಕತಗಾಲನಲ್ಲಿ ಇತ್ತೀಚೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದರು. ಶಿರಸಿಯ ಕಸ್ತೂರಿ ಬಾ ನಗರ ನಿವಾಸಿ ಮಹಮ್ಮದ್ ಅಸ್ಲಾಂ ಬಾಬಾಜಾನ್ ಕರ್ಕಿಮಕ್ಕಿ ಹಾಗೂ ಶಿರಸಿಯ ಅಂಜೂ ಫರ್ನಿಚರ್ ಮಾಲೀಕ ಅಂಥೋನ್ ಬಿ ನರೋನಾ ಬಂಧಿತ ಆರೋಪಿಗಳು. ತಡರಾತ್ರಿ ವಾಹನದಲ್ಲಿ ಕಡವೆ ಕೊಂಬು ಸಾಗಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಕತಗಾಲ ಬಳಿ ಕಾರ್ಯಾಚರಣೆಗಿಳಿದಿದ್ದ ಉಪವಲಯ ಅರಣ್ಯಾಧಿಕಾರಿ ಬಿ. ಎನ್. ಬಂಕಾಪುರ ನೇತೃತ್ವದ ಸಿಬ್ಬಂದಿ ಮುಂಜಾನೆ ಬಂದ ಎಲ್ಲ ವಾಹನಗಳ ತಪಾಸಣೆ ನಡೆಸಿದ್ದರು.
ಇದನ್ನೂ ಓದಿ: ಬಾಳೆಗೊನೆ ಜೊತೆ 4 ಕಡವೆ ಕೊಂಬು, ನಾಟ ಸಾಗಾಟ.. ಕುಮಟಾದಲ್ಲಿ ಇಬ್ಬರ ಬಂಧನ