ದಾವಣಗೆರೆ: "ಬಿ.ಎಸ್.ಯಡಿಯೂರಪ್ಪನವರು 45 ವರ್ಷಗಳ ಕಾಲ ಪಕ್ಷ ಸಂಘಟಿಸಿದಂತೆ ನಾವೂ ಕೂಡ ಪಕ್ಷ ಸಂಘಟಿಸಿ ಅಧಿಕಾರಕ್ಕೆ ತರಬೇಕು" ಎಂದು ಬಿ.ವೈ.ವಿಜಯೇಂದ್ರ ಯುವ ಕಾರ್ಯಕರ್ತರಿಗೆ ಕರೆ ಕೊಟ್ಟರು. ನಗರದ ಮಾಗನೂರು ಬಸಪ್ಪ ಮೈದಾನದಲ್ಲಿ ನಡೆದ ಬಿಜೆಪಿ ಯುವ ಸಮಾವೇಶದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
"ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯದಲ್ಲೆಡೆ ಸಂಚರಿಸಿದರೆ 150 ಸ್ಥಾನ ಕಟ್ಟಿಟ್ಟ ಬುತ್ತಿ. ಅವರು ಹೇಗೆ 45 ವರ್ಷಗಳ ಕಾಲ ರಾಜ್ಯ ಸುತ್ತಾಡಿ ಪಕ್ಷ ಸಂಘಟಿಸಿದರೋ, ಎಲ್ಲಾ ಸಮುದಾಯದ ಪರ ಧ್ವನಿ ಎತ್ತಿದರೋ ಹಾಗೆಯೇ ನಾವೂ ಕೂಡ ರಾಜ್ಯ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಬೇಕು" ಎಂದರು. "ಪ್ರಧಾನಿ ಮೋದಿಯವರು ಮತ್ತೆ ಪ್ರಧಾನಮಂತ್ರಿ ಆಗುವುದನ್ನು ಯಾವ ದುಷ್ಟಶಕ್ತಿಗಳೂ ತಡೆಯಲು ಸಾಧ್ಯವಿಲ್ಲ. ಯಡಿಯೂರಪ್ಪ ರೈತ ನಾಯಕರು. ರಾಜ್ಯದ ಆಧುನಿಕ ಭಗೀರಥ. ನಾಲ್ಕು ಬಾರಿ ಸಿಎಂ ಆಗಿದ್ದವರು. ಪ್ರತ್ಯೇಕ ಬಜೆಟ್ ಬಂಡನೆ ಮಾಡಿ ರೈತರಿಗೆ ಸಾಲ ಕೊಟ್ಟು ಪ್ರಯೋಜನ ಮಾಡಿದ ಏಕೈಕ ನಾಯಕ" ಎಂದು ತಮ್ಮ ತಂದೆಯ ಬಗ್ಗೆ ಗುಣಗಾನ ಮಾಡಿದರು.
"65 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ದಿವಾಳಿ ಆಗಿದೆ. ಅವರ ಬಳಿ 60 ಎಂಪಿಗಳೂ ಇಲ್ಲ. ಸಿಎಂ ಆಗುವ ಹಗಲು ಕನಸು ಕಾಣುತ್ತಿದ್ದಾರೆ" ಎಂದು ಟೀಕಿಸಿದರು. "ಮುಂದಿನ ಚುನಾವಣೆಯಲ್ಲಿಯೂ ಕೂಡ ಜನರು ನಿಮಗೆ ಆಶೀರ್ವಾದ ಮಾಡುವುದಿಲ್ಲ. ಐದು ವರ್ಷಗಳ ಕಾಲ ಆಡಲಿತ ನಡೆಸಿದ ಕಾಂಗ್ರೆಸ್ ಆಡಳಿತಾವಧಿಯಲ್ಲಿ 25 ರಿಂದ 30 ಹಿಂದೂ ಕಾರ್ಯಕರ್ತ ಹತ್ಯೆ ನಡೆದಿದೆ. ಕೆಲವರು ಸಿಎಂ ಆಗಲು ಕನಸು ಕಂಡು ಜಾತಿಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿದರು. ವೀರಶೈವ ಲಿಂಗಾಯತ ಸಮುದಾಯ ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಿದರು" ಎಂದು ವಾಗ್ದಾಳಿ ನಡೆಸಿದರು.
ಸಚಿವ ಅಶ್ವಥ್ ನಾರಾಯಣ್ ಮಾತನಾಡಿ, "ಅಧಿಕಾರಕ್ಕಾಗಿ ಕಾಂಗ್ರೆಸ್‌ನವರು ಯಾರನ್ನು ಬೇಕಾದರೂ ಕೂಡ ಹತ್ಯೆ ಮಾಡಲು ತಯಾರಿದ್ದಾರೆ. ಅವರು ಯಾವ ಕೀಳುಮಟ್ಟಕ್ಕೆ ಹೋಗುವುದಕ್ಕೂ ಹೇಸುವುದಿಲ್ಲ" ಎಂದರು. "ಇದು ನಮ್ಮ ದೇಶ, ನಮ್ಮ ನೆಲೆ ಎಂದು ಸೇವೆ ಸಲ್ಲಿಸುತ್ತ ತ್ಯಾಗ ಮಾಡಿದ ಸೈನಿಕರನ್ನು ಬಲಿಪಡೆದಿದ್ದು ಇದೇ ಕಾಂಗ್ರೆಸ್‌ನವರು. ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದವರು ನಾವು" ಎಂದರು.
ಇದನ್ನೂ ಓದಿ: 'ನನ್ನನ್ನೂ ಹತ್ಯೆ ಮಾಡಿ'.. ಮೈಸೂರಲ್ಲಿ ಸಚಿವ ಅಶ್ವತ್ಥನಾರಾಯಣ್ ವಿರುದ್ಧ ಬೃಹತ್ ಪ್ರತಿಭಟನೆ