ದಾವಣಗೆರೆ: ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಶತಸಿದ್ದ ಎಂದು ಸಂಸದ ಜಿ .ಎಂ . ಸಿದ್ದೇಶ್ವರ್ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಮದಿಗೆ ಮಾತನಾಡಿದ ಅವರು,ಪ್ರಧಾನಿಮೋದಿಯವರ ನೇತೃತ್ವದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಜಿಲ್ಲೆಯಲ್ಲಿ ಬಿಜೆಪಿ ಜಯ ಸಾಧಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದೇ ನನ್ನ ಕೊನೆ ಚುನಾವಣೆ. ನಂತರ ಚುನಾವಣಾ ನಿವೃತ್ತಿ ಘೋಷಿಸುತ್ತೇನೆ. ನಮಗೆ ಎದುರಾಳಿ ಪಕ್ಷ ಎಂದರೆ ಅದು ಕಾಂಗ್ರೆಸ್ ಮಾತ್ರ ಎಂದರು.
ರಾಜ್ಯ ಸುತ್ತಾಡದವರಿಗೆ, ಕೆಲಸ ಮಾಡದವರಿಗೆ ಜನ ಅನುಕಂಪ ಮತ ಹಾಕುವುದಿಲ್ಲ. ಕೆಲಸ ಮಾಡಿದವರಿಗೆ ಮಾತ್ರ ಜನರು ಅನುಕಂಪ ತೋರುತ್ತಾರೆ ಎಂದು ಮಾಜಿ ಸಚಿವ ಎಸ್ .ಎಸ್ ಮಲ್ಲಿಕಾರ್ಜುನ್ ಅವರಿಗೆ ಸಿದ್ದೇಶ್ವರ್ ಪರೋಕ್ಷವಾಗಿ ಟಾಂಗ್ ನೀಡಿದರು.
ನೂರಕ್ಕೆ ನೂರರಷ್ಟು ಜಿಲ್ಲೆಯಲ್ಲಿ ಬಿಜೆಪಿ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಿರುವ ಮೈತ್ರಿ ಸರ್ಕಾರ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿಲ್ಲ. ಇದು ನಮ್ಮ ಪಕ್ಷಕ್ಕೆ ವರವಾಗಲಿದೆ ಎಂದು ಸಿದ್ಧೇಶ್ವರ್ ಅಭಿಪ್ರಾಯಪಟ್ಟರು.