ದಾವಣಗೆರೆ: ಅನರ್ಹ ಶಾಸಕರ ಪರ ಬ್ಯಾಟಿಂಗ್ ಮಾಡಿರುವ ಸಿ. ಟಿ. ರವಿ, ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆಯಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಟಿಕೆಟ್ ನೀಡುವ ವಿಚಾರ ಸಂಬಂಧ ಪಕ್ಷದ ಸಂಸದೀಯ ಮಂಡಳಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
ನಗರದಲ್ಲಿ ಮಾತನಾಡಿದ ಅವರು, 105 ಸ್ಥಾನ ಗೆದ್ದ ಬಿಜೆಪಿ ಅಧಿಕಾರ ಹಿಡಿದಿರುವುದಲ್ಲಿ ತಪ್ಪೇನಿಲ್ಲ. ಕಾಂಗ್ರೆಸ್ ಕೂಡ ಜೆಡಿಎಸ್ ಜೊತೆ ಸೇರಿ ವಾಮ ಮಾರ್ಗದಿಂದ ಅಧಿಕಾರಕ್ಕೇರಿತ್ತು ಎಂದಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ರಾಜ್ಯಕ್ಕೂ ಒಳ್ಳೆದಲ್ಲ, ನಮಗೂ ಒಳ್ಳೆಯದಲ್ಲ ಎಂದು ಆ ಪಕ್ಷಗಳ ಶಾಸಕರು ರಾಜೀನಾಮೆ ಕೊಡುವ ಮೂಲಕ ಬೆಂಬಲಿಸಿದ್ದಾರೆ. ನಾವೇನೂ ಸನ್ಯಾಸಿಗಳಲ್ಲ. ನಮಗೇನೂ ಆತಂಕವಿಲ್ಲ ಸರ್ಕಾರ ಮೂರೂವರೆ ವರ್ಷ ಇರುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಟಿಪ್ಪು ಜಯಂತಿ ಹೆಸರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕಾರಣ ಮಾಡುವುದಾದರೆ ನಾವ್ಯಾಕೆ ರಾಜಕಾರಣ ಮಾಡಬಾರದು ಎಂದು ಪ್ರಶ್ನಿಸಿದ ಅವರು, ಟಿಪ್ಪು ವಿಷಯದಲ್ಲಿ ವೈಭವೀಕರಣವೂ ಸಲ್ಲದು, ಉಪೇಕ್ಷವೂ ಸಲ್ಲದು. ಬ್ರಿಟೀಷರ ವಿರುದ್ದ ಹೋರಾಡಿದವರೆಲ್ಲರೂ ಸ್ವಾತಂತ್ರ ಹೋರಾಟಗಾರರಾ ಎಂಬ ಬಗ್ಗೆ ಚರ್ಚೆ ಮಾಡುವ ಪರಿಸ್ಥಿತಿ ಬಂದಿದೆ ಎಂದರು. ಟಿಪ್ಪು ನಂಜನಗೂಡು, ಶೃಂಗೇರಿಗೆ ಉಂಬಳಿ ಕೊಟ್ಟದ್ದನ್ನು ಹೇಗೆ ವೈಬವೀಕರಿಸುತ್ತೇವೆಯೋ ಹಾಗೆಯೇ ಕೊಡವರ ಮಾರಣಹೋಮ, ನೂರಾರು ದೇವಸ್ಥಾನಗಳ ಧ್ವಂಸದ ಬಗ್ಗೆಯೂ ಮಾತನಾಡಬೇಕು ಎಂದರು.
ಶ್ರೀರಂಗಪಟ್ಟಣದ ಮೂಡಲಬಾಗಿಲು ಆಂಜನೇಯಸ್ವಾಮಿ ಮಸೀದಿಯಾಗಿ ಪರಿವರ್ತನೆಯಾಗಿದೆ. ಈ ದೇಗುಲದ ಜಾಗದಲ್ಲಿ ಉತ್ಸವ ಮಾಡಲಿ. ಇಲ್ಲಿ ಹಿಂದೂ ದೇವಾಲಯದ ಸಂಬಂಧ ಇರುವ ದೇವರ ಪ್ರತಿಕೃತಿಗಳು, ಪಳಯುಳಿಕೆ ಇರುವುದು ಸುಳ್ಳಾದರೆ ನಾನು ತಲೆದಂಡಕ್ಕೆ ಸಿದ್ದ. ನಾನು ಸಿದ್ದರಾಮಯ್ಯ ತಲೆದಂಡ ಆಗಲಿ ಎಂದು ಬಯಸೋದಿಲ್ಲ. ಮೈಸೂರು ಅರಸರು ಹಾಗೂ ಟಿಪ್ಪು ಸಿದ್ದರಾಮಯ್ಯ ಯಾರನ್ನ ಆಯ್ಕೆ ಮಾಡಿಕೊಳ್ಳುತ್ತಾರೆ ತಿಳಿಸಲಿ. ನಾನಂತೂ ಅರಸರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದರು.