ದಾವಣಗೆರೆ: ಹೆಲ್ಮೆಟ್ ಇಲ್ಲದೇ ವಾಹನ ಚಾಲನೆ ಮತ್ತು ವಾಹನ ಚಾಲನೆ ಮಾಡುವ ವೇಳೆ ಮೊಬೈಲ್ನಲ್ಲಿ ಮಾತನಾಡುವ ಮೂಲಕ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ದ್ವಿಚಕ್ರವಾಹನದ ಮಾಲೀಕನ ವಿರುದ್ಧ ಸಂಚಾರಿ ಪೊಲೀಸರು ಬರೋಬ್ಬರಿ 16 ಸಾವಿರ ದಂಡ ಹಾಕಿದ್ದಾರೆ. ನಿರಂತರ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಬೈಕ್ ನಂಬರ್ ಕೆಎ 17 ಇ ಎಹೆಚ್ 0498 ನೋಂದಣಿಯ ದ್ವಿಚಕ್ರವಾಹನದ ಮಾಲೀಕ ವಿರೇಶ್ ಎಂಬುವರು 16 ಸಾವಿರ ದಂಡ ತೆತ್ತವರು.
ದಾವಣಗೆರೆ ನಗರದ ನಿವಾಸಿ ವಿರೇಶ್ ಒಟ್ಟು 26 ಸಲ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದು, ಈ 26 ಕೇಸ್ಗಳ ಪೈಕಿ ಹೆಲ್ಮೆಟ್ ಇಲ್ಲದೇ ಬೈಕ್ ಸಂಚಾರ 23 ಹಾಗೂ ಬೈಕ್ ಚಲಿಸುವಾಗ ಮೊಬೈಲ್ ಬಳಕೆ 03 ಕೇಸ್ ಹಾಕಲಾಗಿತ್ತು. ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣಗಳು ದಾಖಲಾಗಿದ್ದವು. ದಾವಣಗೆರೆ ಸಂಚಾರಿ ಠಾಣೆಯ ಪೊಲೀಸರ ಕೈಗೆ ಅಚಾನಕ್ ಆಗಿ ಸಿಕ್ಕಾಗ ವಿರೇಶ್ ಬೈಕ್ ಮೇಲಿದ್ದ ಒಟ್ಟು 26 ಕೇಸ್ಗಳಿಗೆ ಸಂಬಂಧಿಸಿದಂತೆ ಒಟ್ಟು 16 ಸಾವಿರ ದಂಡವನ್ನು ಕಟ್ಟಿಸಿಕೊಂಡಿದ್ದಾರೆ.
ನೋಟಿಸ್ಗೆ ಕ್ಯಾರೇ ಎನ್ನದ ಮಾಲೀಕ: ಹೆಲ್ಮೆಟ್, ಮೊಬೈಲ್ ಬಳಕೆಗೆ ಸಂಬಂಧಿಸಿದಂತೆ ಇಲ್ಲಿನ ಆಯಾಯ ಸರ್ಕಲ್ನಲ್ಲಿನ ಸಿಸಿಕ್ಯಾಮರಾಗಳು ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರ ವಾಹನ ಮತ್ತು ನಂಬರ್ ಪ್ಲೇಟ್ ಕ್ಯಾಪ್ಚರ್ ಮಾಡುವ ತಂತ್ರಜ್ಞಾನ ಹೊಂದಿದೆ. ಇದೇ ಮಾರ್ಗದಲ್ಲಿ ಓಡಾಡಿದ್ದ ವಿರೇಶ್ ಸಾಕಷ್ಟು ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದು ಗೊತ್ತಾಗಿತ್ತು. ಹಾಗಾಗಿ ಕೆಎ 17 ಇ ಎಹೆಚ್ 0498 ನೋಂದಣಿಯ ಬೈಕ್ ಮಾಲೀಕರಿಗೆ ಸಂಬಂಧಪಟ್ಟ ಅಧಿಕಾರಿಗಳು ದಂಡ ಕಟ್ಟುವಂತೆ ಸಾಕಷ್ಟು ಬಾರಿ ನೋಟಿಸ್ ಕಳಿಸಿದ್ದರು. ಆದರೆ ವಿರೇಶ್ ಮಾತ್ರ ಯಾವುದಕ್ಕೂ ಕ್ಯಾರೆ ಎಂದಿರಲಿಲ್ಲ. ಸೋಮವಾರ ಸಿಬ್ಬಂದಿಯ ಕೈಗೆ ಸಿಕ್ಕಾಗ 16 ಸಾವಿರ ದಂಡ ಕಟ್ಟಿರುವುದಾಗಿ ತಿಳಿದು ಬಂದಿದೆ.
ಇದನ್ನೂ ಓದಿ: ಬೆಂಗಳೂರಿಗೆ ನಾಲ್ಕು ಹೊಸ ಸಂಚಾರ ಪೊಲೀಸ್ ಠಾಣೆ ಸ್ಥಾಪನೆಗೆ ಸರ್ಕಾರದ ಸಮ್ಮತಿ