ದಾವಣಗೆರೆ: ಶಾಸಕ ರಮೇಶ್ ಜಾರಕಿಹೊಳಿ ಬೆಳಗಾವಿ ಗಡಿ ವಿಚಾರದಲ್ಲಿ ಮಲ್ಲಪ್ಪಶೆಟ್ಟಿ ಕುತಂತ್ರ ಬುದ್ಧಿ ಬಿಡಬೇಕು ಎಂದು ಕನ್ನಡ ಪರ ಸಂಘಟನೆ ಹೋರಾಟಗಾರ ಭೀಮಾಶಂಕರ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಕನ್ನಡಿಗರ ವಿರುದ್ದ ನಿಂತು ಗೆದ್ದರೆ ಮರಾಠಿ ಶಾಸಕರಿಗೆ ಐದು ಕೋಟಿ ರೂಪಾಯಿ ನೀಡುವುದಾಗಿ ಕನ್ನಡಿಗರನ್ನು ಕೆರಳಿಸುವ ಹೇಳಿಕೆಯನ್ನು ರಮೇಶ್ ಜಾರಕಿಹೊಳಿ ನೀಡಿದ್ದಾರೆ. ಆ ಹಣ ನೀವು ಎಲ್ಲಿ ಗಳಿಸಿದ್ದೀರಿ ಅಂತಾ ಗೊತ್ತಿದೆ. ಕನ್ನಡಿಗ-ಮರಾಠಿಗರ ಮಧ್ಯೆ ಬೆಂಕಿ ಹಚ್ಚಿ ನಾಡದ್ರೋಹಿ ಹೇಳಿಕೆ ನೀಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬೆಳಗಾವಿ ಕಿತ್ತೂರ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರ ಕರ್ಮಭೂಮಿ, ಇಲ್ಲಿ ಮರಾಠಿ ಏಕೀಕರಣ ಸಮಿತಿ, ಶಿವಸೇನೆ ಪುಂಡಾಟ ನಡೆಸುತ್ತಿದೆ. ಇವರಿಗೆ ಬಟ್ಟೆ ಕಳಚಿ ಮಹಾರಾಷ್ಟ್ರಕ್ಕೆ ಕಳುಹಿಸುವುದು ಗೊತ್ತಿದೆ. ಇಂತಹ ಭೂಮಿ ಬಗ್ಗೆ, ಕನ್ನಡಿಗರ ಬಗ್ಗೆ ಮಾತನಾಡಲು ನೂರು ಬಾರಿ ಯೋಚಿಸಬೇಕು. ಜನವರಿ 20ರಂದು ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಹತ್ತು ಸಾವಿರ ಜನ ಸೇರಿ ಸಾಮೂಹಿಕವಾಗಿ ನಾಡಗೀತೆ ಹೇಳುವ ಮೂಲಕ ಕರ್ನಾಟಕದ ವೈಭವವನ್ನು ಸಾರಿ, ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನೆ ನಿಷೇಧಕ್ಕೆ ಒತ್ತಡ ತರುತ್ತೇವೆ ಎಂದರು.