ದಾವಣಗೆರೆ: ಮಳೆಗಾಲದ ಹಂಗಾಮಿನ ಬೆಳೆ ಬೆಳೆಯಲು ಭದ್ರಾ ಬಲದಂಡೆ ಕಾಲುವೆಗೆ ಈಗಾಗಲೇ ಆಗಸ್ಟ್ 10ರಿಂದ ನೀರು ಹರಿಸಲಾಗುತ್ತಿದೆ. ಭದ್ರಾ ನೀರಿನ ಮಟ್ಟ ಇಂದು 166.9 ಅಡಿ ಇದ್ದು, 170 ಅಡಿಗೆ ನೀರು ತಲುಪಿದರೆ ಕಾಲುವೆಗಳಿಗೆ ಸಂಪೂರ್ಣವಾಗಿ ನೀರು ಹರಿಸಲು ಸಮಸ್ಯೆ ಆಗುವುದಿಲ್ಲ ಎಂದು ಚೆನ್ನಗಿರಿ ಶಾಸಕ ಬಸವರಾಜು ವಿ.ಶಿವಗಂಗಾ ತಿಳಿಸಿದರು.
ಈ ಕುರಿತು ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಜಲಾಶಯದಲ್ಲಿ ನೀರು ಇರುವುದರಿಂದ ಬೆಳೆ ಬೆಳೆಯಲು ರೈತರಿಗೆ ಯಾವುದೇ ಸಮಸ್ಯೆ ಆಗದು. ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ಕೂಡ ಮಾಡಲಾಗಿದೆ. ಕಾಲುವೆಗೆ ಹರಿಯುತ್ತಿರುವ ನೀರು ನಿಲ್ಲಿಸುವ ಕುರಿತು ಸರ್ಕಾರದ ಯಾವುದೇ ಪ್ರಸ್ತಾಪ ಬಂದಿಲ್ಲ. ಹಾಗಾಗಿ ರೈತರು ಆತಂಕ ಪಡಬೇಕಾಗಿಲ್ಲ. ರೈತರಿಗೆ ತೊಂದರೆಯಾಗಲು ನಾನು ಬಿಡುವುದಿಲ್ಲ ಎಂದರು.
ಭದ್ರಾ ಜಲಾಶಯಕ್ಕೆ 170 ಅಡಿ ನೀರು ಸಂಗ್ರಹವಾದರೆ 100 ದಿನಗಳಿಗೂ ಹೆಚ್ಚು ನೀರು ಹರಿಸಬಹುದು. ಮಲೆನಾಡು ಭಾಗದಲ್ಲಿ ಸ್ವಲ್ಪ ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಒಳಹರಿವು ಸ್ವಲ್ಪ ಕಡಿಮೆಯಾಗಿದೆ. ಆದರೂ ಸಹ ರೈತರ ಜಮೀನುಗಳಿಗೆ ನೀರು ಹರಿಸಲು ಯಾವುದೇ ಸಮಸ್ಯೆ ಇಲ್ಲ. ಮುಂದಿನ ದಿನಗಳಲ್ಲಿ ಮಳೆಯಾಗುವು ಸಾಧ್ಯತೆಯಿದೆ. ಕೆಲವರು ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಂಥವರ ಮಾತಿಗೆ ರೈತರು ಕಿವಿಗೊಡಬಾರದು.
ಇದನ್ನೂ ಓದಿ: ಕೇಂದ್ರದ 5 ಕೆಜಿ ಅಕ್ಕಿ ಯುಪಿಎ ಸರ್ಕಾರದ ಕೊಡುಗೆ, ಮೋದಿ ಅವರದ್ದಲ್ಲ: ಸಚಿವ ಸಂತೋಷ್ ಲಾಡ್
ಭದ್ರಾ ಅಚ್ಚುಕಟ್ಟು ಪ್ರದೇಶಗಳಲ್ಲಿ ಈಗಾಗಲೇ ಭತ್ತ ಬೆಳೆದ ರೈತರು ಈ ಬಗ್ಗೆ ಚಿಂತಿಸಬೇಡಿ, ಬೆಳೆಗೆ ಬೇಕಾದ ನೀರು ಹರಿಸಲಾಗುತ್ತದೆ. ಆಗಸ್ಟ್ 10ರಿಂದಲೇ ಭದ್ರಾ ಕಾಲುವೆಗೆ ನೀರು ಹರಿಬಿಡಲಾಗಿದೆ. ನಿಗದಿಯಂತೆ ರೈತರ ಬೆಳೆಗಳಿಗೆ ನೀರು ಬರುತ್ತದೆ. ನಿಮ್ಮ ಪರವಾಗಿ ಕೆಲಸ ಮಾಡುವುದಾಗಿ ಶಾಸಕ ಬಸವರಾಜು ಭರವಸೆ ನೀಡಿದರು.
ಬೆಳೆ ನಾಶಪಡಿಸಿದ ರೈತರು: ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿದ್ದರಿಂದ ಇಲ್ಲಿನ ರೈತರು ಕಂಗಾಲಾಗಿದ್ದಾರೆ. ಸರಿಯಾದ ಪ್ರಮಾಣದಲ್ಲಿ ಮಳೆ ಇಲ್ಲದ ಕಾರಣ ಹೈರಾಣಾಗಿರುವ ರೈತರು ಸಾಲ ಮಾಡಿ ಬೆಳೆದಿರುವ ಬೆಳೆಗಳು ಕೂಡ ನೆಲಕಚ್ಚಿವೆ. ಸರಿಯಾಗಿ ಮಳೆಇಲ್ಲದ ಕಾರಣ ಇಲ್ಲಿಯ ಭಾನುಹಳ್ಳಿಯಲ್ಲಿ 1,200 ಎಕರೆ ಪ್ರದೇಶದಲ್ಲಿ ಬೆಳೆದ ಮೆಕ್ಕಜೋಳ ಬೆಳೆ ಮೇಲೆ ಟ್ರಾಕ್ಟರ್ ಹರಿಸಿ ರೈತರು ನಾಶಪಡಿಸಿದ್ದಾರೆ.
ಕಳೆದ ತಿಂಗಳು ಸುರಿದಿದ್ದ ಮಳೆ ಇದೀಗ ಕೈಕೊಟ್ಟಿದೆ. ಹರಿಹರ ತಾಲೂಕಿನ ಭಾನುಹಳ್ಳಿಯಲ್ಲಿ ಸರಿಯಾದ ಮಳೆ ಇಲ್ಲದೆ ಕಾರಣ ಮೆಕ್ಕೆಜೋಳ ಬೆಳೆ ಒಣಗಿ ಹೋಗಿವೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ನಿರಾಸೆಗೊಂಡಿದ್ದಾರೆ. ನೀರಿಲ್ಲದೆ ಬೆಳೆ ಒಣಗಿದ್ದರಿಂದ ದಿಕ್ಕು ತೋಚದೆ ರೈತ ಟ್ರಾಕ್ಟರ್ ಹರಿಸಿದ್ದಾರೆ. ಗುರುಮೂರ್ತಿ ಎನ್ನುವರು ಎಕರೆಗೆ 25 ಸಾವಿರದಂತೆ ಖರ್ಚು ಮಾಡಿ ಮೆಕ್ಕೆ ಜೋಳ ಬೆಳೆ ನಾಟಿದ್ದರು. ಫಸಲು ಕೈ ಸೇರುವ ಹಂತದಲ್ಲಿ ಮಳೆ ಕೈಕೊಟ್ಟಿದ್ದು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ