ದಾವಣಗೆರೆ: ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ಅಡಕೆಗೆ ಚಿನ್ನದ ಬೆಲೆ ಬಂದಿದೆ. ಕ್ವಿಂಟಾಲ್ಗೆ 60 ರಿಂದ 70 ಸಾವಿರ ಬೆಲೆ ಇದೆ. ಇದರಿಂದ ಚನ್ನಗಿರಿ ಸೇರಿದಂತೆ ಜಿಲ್ಲೆಯ ಸಾಕಷ್ಟು ಭಾಗಗಳಲ್ಲಿ ಅಡಕೆ ಕಳ್ಳರ ಕಾಟ ಹೆಚ್ಚಾಗಿದ್ದು, ರೈತರಿಗೆ ತಲೆನೋವಾಗಿ ಪರಿಣಮಿಸಿದೆ.
ಮೊದಲು ಒಣಗಿಸಿ ಮಾರಾಟಕ್ಕೆ ಯೋಗ್ಯವಾದ ಅಡಕೆಗೆ ಕಳ್ಳರು ಕನ್ನ ಹಾಕುತ್ತಿದ್ದರು. ಅಡಕೆ ಬೆಲೆ ಹೆಚ್ಚಳ ಹಿನ್ನೆಲೆ ಸದ್ಯ ತೋಟಗಳಿಗೆ ನುಗ್ಗಿ ಹಸಿ ಅಡಕೆಯನ್ನು ಖದೀಮರು ಹೊತ್ತಯ್ಯುತ್ತಿದ್ದಾರೆ. ದಾವಣಗೆರೆ ತಾಲೂಕಿನ ಐಗೂರು, ಅಣಜಿ, ಮಾಯಕೊಂಡ ಹೋಬಳಿ, ಚನ್ನಗಿರಿ, ಸಂತೆಬೆನ್ನೂರು, ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಅಡಕೆ ಕಳ್ಳರ ಕಾಟ ಜೋರಾಗಿದೆ.
ಕಳ್ಳತನ ಕುರಿತು ಗ್ರಾಮಾಂತರ ಠಾಣೆಯ ಪೊಲೀಸರ ಗಮನಕ್ಕೆ ತಂದ್ರು ಕೂಡ ಯಾವುದೇ ಪ್ರಯೋಜನ ಆಗಿಲ್ಲವಂತೆ. ಇದರಿಂದ ಚಿಂತೆಗೀಡಾದ ರೈತರು ತಮ್ಮ ತೋಟಗಳಲ್ಲಿ ವಾಸ್ತವ್ಯ ಹೂಡುವ ಮೂಲಕ ವರ್ಷಗಟ್ಟಲೆ ಕಷ್ಟ ಪಟ್ಟು ಬೆಳೆದ ಬೆಳೆಯನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಈ ಮೊದಲು ಚನ್ನಗಿರಿಯಲ್ಲಿ ಹೆಚ್ಚು ಅಡಕೆ ಕಳ್ಳತನ ಆಗುತ್ತಿತ್ತು. ಸದ್ಯ ಜಿಲ್ಲಾದ್ಯಂತ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ವಾಹನ ತೆಗೆದುಕೊಂಡು ಬರುವ ಕಳ್ಳರು ಅಡಕೆ ಮರ ಏರಿ ಅಡಕೆ ಕಿತ್ತು ಹೊತ್ತೊಯ್ಯುತ್ತಿದ್ದಾರೆ. ರಾತ್ರಿ ವೇಳೆ ಬೀಟ್ ಮಾಡುತ್ತಿದ್ದ ಗ್ರಾಮಾಂತರ ಠಾಣೆ ಪೊಲೀಸರು ಇತ್ತ ಬಾರದೇ ಇದ್ದದ್ದು, ಕಳ್ಳರ ಕಾಟ ಹೆಚ್ಚಾಗಲು ಕಾರಣ ಎನ್ನುತ್ತಾರೆ ರೈತರು.
ಒಟ್ಟಾರೆ ಅಡಕೆ ಕಳ್ಳತನ ಹೆಚ್ಚಾಗುತ್ತಿದ್ದು, ಪೊಲೀಸರು ಮಾತ್ರ ಕೈ ಕಟ್ಟಿಕೂತಿರುವುದು ಆತಂಕಕ್ಕೆ ಕಾರಣ ಆಗಿದೆ. ಆದೇನೆ ಆಗಲಿ ಪ್ರತಿಯೊಬ್ಬರ ರಕ್ಷಣೆ ನಮ್ಮ ಹೊಣೆ ಎಂಬ ಧ್ಯೇಯ ವಾಕ್ಯದ ಮೇಲೆ ಕಾರ್ಯನಿರ್ವಹಿಸುವ ಪೊಲೀಸರು ಇದರದಂತೆ ನಡೆದುಕೊಂಡು ರೈತರಿಗೆ ಆಸರೆಯಾಗಿ ಅಡಕೆ ಕಳವನ್ನು ತಪ್ಪಿಸಬೇಕು ಎಂಬುದು ಜನರ ಒತ್ತಾಯ.