ದಾವಣಗೆರೆ: ಮಾಜಿ ಸಚಿವ ಎಂ. ಬಿ. ಪಾಟೀಲ್ ಒಮ್ಮೆ ಕೈ ಸುಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ನಾಶ ಮಾಡಿದ್ದರು. ಇದೀಗ ಮತ್ತೆ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಕೈ ಹಾಕಿದ್ರೆ ಪಕ್ಷ ಸರ್ವನಾಶ ಆಗುತ್ತೆ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇವತ್ತು ನಮ್ಮ ಗೃಹ ಮಂತ್ರಿಗಳು ಜಿಲ್ಲೆಗೆ ಬಂದಿದ್ದಾರೆ. ಅದಕ್ಕೆ ನಾವು ಬಂದಿದ್ದೇವೆ. ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಅವರಿಗೆ ಬಿಟ್ಟ ವಿಚಾರ. ಸದ್ಯಕ್ಕೆ ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ಒಂದು ಕುಟುಂಬ ಅಂದ ಮೇಲೆ ಅಸಮಾಧಾನ ಇದ್ದೇ ಇರುತ್ತೆ. ಮನೆಯಲ್ಲಿ ಎಲ್ಲಾ ಮಕ್ಕಳು ಒಂದೇ ರೀತಿ ಇರುವುದಿಲ್ಲ. ವಿಸ್ತರಣೆ ಬಗ್ಗೆ ಸಿಎಂ ಅವರನ್ನೇ ಕೇಳಿ ಎಂದರು.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬಿಜೆಪಿ ಏಜೆಂಟ್ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಬಿ ಸಿ ಪಾಟೀಲ್, ಹೆಚ್ಡಿಕೆ ಅವರಿಗೆ ನಾಲಿಗೆ ಮೇಲೆ ಹಿಡಿತವಿಲ್ಲ. ಪಕ್ಷ ಸಂಘಟನೆ ಮಾಡೋದಕ್ಕೆ ಬಂದವರನ್ನ ಹಣ ಪಡೆಯಲು ಬಂದವರು ಎಂದು ಹೇಳುವುದು ಅರ್ಥಹೀನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.