ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ ಸಚಿವ ಸ್ಥಾನ ನೀಡುವುದು ಸಿಎಂ ಅವರಿಗೆ ಬಿಟ್ಟ ವಿಚಾರ ಎಂದು ದಾವಣಗೆರೆಯಲ್ಲಿ ಕೂಡಲಸಂಗಮದ ಪಂಚಮಸಾಲಿ ಗುರುಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ವಸಂತ ರಸ್ತೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಪಂಚಮಸಾಲಿ ಸಮಾಜಕ್ಕೆ ಸಚಿವ ಸ್ಥಾನ ಕೇಳಿ ಕೇಳಿ ಬೇಸರವಾಗಿದೆ.ಈ ಹಿನ್ನೆಲೆ ಪಂಚಮಸಾಲಿ ಸಮಾಜದ ಶಾಸಕರ ಸಭೆ ನಡೆಸಲಾಗಿದೆ. ಕಳೆದ ಸಲ ಸಚಿವ ಸಂಪುಟ ವಿಸ್ತರಣೆ ವೇಳೆ ಮಹೇಶ್ ಕುಮಟಳ್ಳಿ ಅವರನ್ನ ಕೈ ಬಿಟ್ಟಿದ್ದು ಬೇಸರದ ವಿಚಾರ, ಪದೇ ಪದೇ ಸಮಾಜಕ್ಕೆ ಸಚಿವ ಸ್ಥಾನ ಕೇಳುವುದು ಮುಜುಗರ ಆಗುತ್ತಿದೆ. ಮುಖ್ಯಮಂತ್ರಿಗಳೇ ನಿರ್ಧಾರ ತೆಗೆದುಕೊಳ್ಳಲಿ. ಸ್ವಾಮೀಜಿಗಳಾದ ನಾವು ಸಲಹೆ ನೀಡಿದ್ದೇವೆ ಎಂದು ತಿಳಿಸಿದರು.
ಪಂಚಮಸಾಲಿ ಸಮಾಜಕ್ಕೆ ಸಚಿವ ಸ್ಥಾನ ನೀಡುವುಕ್ಕಿಂತಲೂ ಓಬಿಸಿ ಅಂದರೆ ಇತರೆ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತಹ ನಿರ್ಧಾರ ಮುಖ್ಯಮಂತ್ರಿಗಳು ತೆಗೆದುಕೊಳ್ಳಲಿ. ಇದರಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದರು. ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ, ನ್ಯಾಯಾಲಯದ ಆದೇಶದ ಕೆಲ ಗಂಟೆಗಳಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಹೋರಾಟಗಾರರಿಗೆ ಸಿಕ್ಕ ಜಯ ಆಗಿದೆ, ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಹಿನ್ನೆಲೆ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸಿಎಂ ಅವರು ಬರುವ ಬಜೆಟ್ ನಲ್ಲಿ ಹೆಚ್ಚು ಹಣ ಮಹದಾಯಿ ಯೋಜನೆಗೆ ಮೀಸಲಿಡಬೇಕು. ಮಹದಾಯಿ ಹಾಗೂ ಮಲಪ್ರಭಾ ನದಿಯನ್ನು ಒಂದುಗೂಡಿಸುವ ಕೆಲಸ 2022ರ ಹೊತ್ತಿಗೆ ಆಗಬೇಕು ಎಂದರು.