ದಾವಣಗೆರೆ: ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆ ಬಗ್ಗೆ ಜಾಗೃತಿ ಮೂಡಿಸಲು ತೆರಳಿದ್ದ ಅಂಗನವಾಡಿ ಕಾರ್ಯಕರ್ತೆ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬಿದರಳ್ಳಿ ತಾಂಡಾದಲ್ಲಿ ನಡೆದಿದೆ.
ಶಶಿಕಲಾ ಬಾಯಿ ಹಲ್ಲೆಗೊಳಗಾದ ಅಂಗನವಾಡಿ ಕಾರ್ಯಕರ್ತೆ. ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ತೆರಳಿದ್ದ ವೇಳೆ ಗ್ರಾಮಕ್ಕೆ ಬೆಂಗಳೂರಿನಿಂದ ಬಂದಿದ್ದ 8 ಜನ ಯುವಕರು ಲಾಕ್ ಡೌನ್ ಇದ್ದರೂ ಅನಾವಶ್ಯಕವಾಗಿ ಓಡಾಡುತ್ತಿದ್ದು, ಶಶಿಕಲಾರ ಗಮನಕ್ಕೆ ಬಂದಿತ್ತು. ಈ ವೇಳೆ ಯುವಕರಿಗೆ ಬುದ್ದಿವಾದ ಹೇಳಿದ್ದರು. ಮನೆಯಲ್ಲಿ ಇರುವಂತೆ ಮನವಿ ಮಾಡಿದ್ದರು. ಇದರಿಂದ ಕುಪಿತಗೊಂಡ ಯುವಕರು ಅಂಗನವಾಡಿ ಕಾರ್ಯಕರ್ತೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಸದ್ಯ ಗಾಯಗೊಂಡ ಇವರನ್ನು ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ತೆರಳಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ, ಕಾರ್ಯಕರ್ತೆಯನ್ನು ಭೇಟಿ ಮಾಡಿ ನಿಮ್ಮ ಜೊತೆ ಸರ್ಕಾರ ಇದೆ, ಹೆದರಬೇಡಿ ಎಂದು ಸಾಂತ್ವನ ಹೇಳಿದರು. ಬಳಿಕ ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸುವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.