ದಾವಣಗೆರೆ: ಗ್ರಾಮಗಳಲ್ಲಿ ಸಮೀಕ್ಷಾ ಕಾರ್ಯ ಮಾಡಲು ಪ್ರತಿ ಮನೆಗೆ ತೆರಳಿದ್ರೆ, ನಾನು ದಲಿತರೆನ್ನುವ ಕಾರಣಕ್ಕೆ ಒಳಗೆ ಪ್ರವೇಶ ನೀಡದೆ ಹೊರಗಡೆ ನಿಲ್ಲಿಸುತ್ತಾರೆ. ಹೀಗಿರುವಾಗ ಹೇಗೆ ಕೆಲಸ ಮಾಡಲಿ ಸರ್? ಎಂದು ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದ ಆಶಾ ಕಾರ್ಯಕರ್ತೆಯೊಬ್ಬರು ತಹಶೀಲ್ದಾರ್ ಹಾಗೂ ತಾಲೂಕು ಕಾರ್ಯನಿರ್ವಹಣಾಧಿಕಾರಿ ಮುಂದೆ ಕಣ್ಣೀರು ಹಾಕಿ, ತಮ್ಮ ಅಳಲು ತೋಡಿಕೊಂಡರು.
ಜಿಲ್ಲೆಯ ಜಗಳೂರು ತಾಲೂಕಿನ ಅಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನನಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾನನಕಟ್ಟೆ ಗ್ರಾಮಸ್ಥರು ನಿಗೂಢ ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸಂತೋಷ್ ಕುಮಾರ್, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಪತಿ, ತಾಲೂಕು ಆರೋಗ್ಯಾಧಿಕಾರಿ ನಾಗರಾಜ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಪೂಜಾರ ಸಿದ್ದಪ್ಪ ಕಾನನಕಟ್ಟೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ತಮ್ಮ ನೋವು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ 7 ಜನರ ದುರ್ಮರಣ
ಅಧಿಕಾರಿಗಳು ಕೆಲಸ ಮಾಡಿ ಎಂದು ಹೇಳುತ್ತಾರೆ. ಆದರೆ ನಾವು ಎಸ್ಸಿ ಜನಾಂಗದವರೆಂದು ಸವರ್ಣೀಯರು ಮನೆಯೊಳಗೆ ಪ್ರವೇಶ ನೀಡುತ್ತಿಲ್ಲ. ಹೀಗಾಗಿ ನೀರು ಸಂಗ್ರಹಿಸುವ ತೊಟ್ಟಿಗಳನ್ನು ಪರಿಶೀಲನೆ ನಡೆಸಲು ಸಾಧ್ಯವಾಗುತ್ತಿಲ್ಲ. ಸಮೀಕ್ಷೆಯನ್ನೂ ನಡೆಸಲಾಗುತ್ತಿಲ್ಲ ಎಂದು ಕಣ್ಣೀರು ಹಾಕಿದರು. ಬಳಿಕ ತಾ.ಪಂ ಇಒ ಲಕ್ಷ್ಮೀಪತಿ ಸಮಾಧಾನಪಡಿಸಿ ಸಮೀಕ್ಷಾ ಕಾರ್ಯ ನಡೆಸುವಂತೆ ತಿಳಿಸಿದರು.