ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಶ್ರೀಗಂಧ ಮರ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಈ ಹಿನ್ನೆಲೆಯಲ್ಲಿ ತಂಡ ರಚಿಸಿಕೊಂಡು ಕಾರ್ಯಾಚರಣೆಗಿಳಿದ ಜಿಲ್ಲಾ ಪೊಲೀಸರು ಇದೀಗ ಖದೀಮರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಇಸ್ಮಾಯಿಲ್ (40), ಜಬೀವುಲ್ಲಾ, (45), ಹೈದರ್ ಖಾನ್ (30) ಎಂದು ಗುರುತಿಸಲಾಗಿದೆ.
ಬಂಧಿತರಲ್ಲಿ ಮೂವರ ಪೈಕಿ ಓರ್ವ ದಾವಣಗೆರೆ ಜಿಲ್ಲೆಯ ಚನ್ನಗಿರಿಯವನಾಗಿದ್ದು, ಉಳಿದ ಇಬ್ಬರು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳು ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 03 ಪ್ರಕರಣಗಳು, ನ್ಯಾಮತಿ ಪೊಲೀಸ್ ಠಾಣೆಯಲ್ಲಿ 02 ಪ್ರಕರಣಗಳು, ಬಸವಾಪಟ್ಟಣ ಠಾಣೆಯಲ್ಲಿ 01 ಪ್ರಕರಣ ಮತ್ತು ಸಂತೇಬೆನ್ನೂರು ಠಾಣೆಯಲ್ಲಿ 01 ಪ್ರಕರಣ ಸೇರಿದಂತೆ ಒಟ್ಟು 7 ಶ್ರೀಗಂಧ ಮರ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಆರೋಪಿಗಳಿಂದ ಒಟ್ಟು 6,50,000 ರೂ. ಬೆಲೆ ಬಾಳುವ 61 ಕೆಜಿ ಶ್ರೀಗಂಧದ ಮರದ ತುಂಡುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ 01 ದ್ವಿಚಕ್ರ ವಾಹನ, 2 ಕೈ ಗರಗಸ, 1 ಮಚ್ಚು, 1 ಕೊಡಲಿ ವಶಕ್ಕೆ ಪಡೆಯಲಾಗಿದೆ.
ಬೀದರ್ನಲ್ಲಿ ಶ್ರೀಗಂಧ ಮರಗಳ್ಳರ ಬಂಧನ : ಕಳೆದ ಜುಲೈ ತಿಂಗಳ ಅಂತ್ಯದಲ್ಲಿ ಪೊಲೀಸ್ ಮತ್ತು ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ ಬೀದರ್ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಮತ್ತು ಅರಣ್ಯ ಇಲಾಖೆಯಲ್ಲಿ ದಾಖಲಾದ ಶ್ರೀಗಂಧ ಮರಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳಿಂದ 8,75,000 ರೂ. ಮೌಲ್ಯದ ವಿವಿಧ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. 5 ಲಕ್ಷ ರೂ. ಮೌಲ್ಯದ ಕಾರು, 45,000 ರೂ. ಮೌಲ್ಯದ ಬೈಕ್ ಹಾಗೂ ಗರಗಸ, ಮೂರು ಮೊಬೈಲ್ ಸೇರಿದಂತೆ ವಿವಿಧ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್.ಎಲ್. ತಿಳಿಸಿದ್ದರು.
ಇದನ್ನೂ ಓದಿ : ಕೊಳ್ಳೇಗಾಲದಲ್ಲಿ ಶ್ರೀಗಂಧ ಸಾಗಣೆ.. ಜಿಂಕೆ ಬುರುಡೆ ಮಾರಾಟಗಾರರ ಬಂಧನ
ಶ್ರೀಗಂಧ ಸಾಗಣೆ ಮಾಡುತ್ತಿದ್ದ ಆರೋಪಿಗಳಿಬ್ಬರು ಪರಾರಿ : ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮುಡಿಗುಂಡ ಗ್ರಾಮದ ಬ್ರಿಡ್ಜ್ ಬಳಿ ಶ್ರೀಗಂಧ ಮರದ ತುಂಡುಗಳನ್ನು ಸಾಗಣೆ ಮಾಡುತ್ತಿದ್ದ ಮೈಸೂರು ಮೂಲದ ಜಾಫರ್ ಷರೀಪ್ ಹಾಗೂ ಮತ್ತೋರ್ವ ಆರೋಪಿ ಪೋಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಅಕ್ರಮ ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಜೂನ್ 3 ರಂದು ಮಾರುತಿ ಓಮಿನಿ ಕಾರಿನಲ್ಲಿ ಶ್ರೀಗಂಧ ಸಾಗಿಸುತ್ತಿದ್ದಾಗ ಕೊಳ್ಳೇಗಾಲ ಬಫರ್ ವಲಯ ಹಾಗೂ ಕೊಳ್ಳೇಗಾಲ ವೈಲ್ಡ್ ಲೈಫ್ನ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಪ್ರಕರಣ ಪತ್ತೆ ಹಚ್ಚಿದ್ದರು. ಕಾರ್ಯಾಚರಣೆ ವೇಳೆ 33 ಶ್ರೀಗಂಧದ ತುಂಡುಗಳು, 1 ಕಾರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ : ಪೊಲೀಸ್, ಅರಣ್ಯ ಇಲಾಖೆಯಿಂದ ಜಂಟಿ ಕಾರ್ಯಾಚರಣೆ: ಶ್ರೀಗಂಧ ಮರಗಳ್ಳರ ಬಂಧನ, 8.75 ಲಕ್ಷ ರೂ. ಮೌಲ್ಯದ ವಿವಿಧ ಸ್ವತ್ತುಗಳ ಜಪ್ತಿ