ದಾವಣಗೆರೆ: ಚನ್ನಗಿರಿ ತಾಲೂಕಿನ ಸೂಳೆಕೆರೆ ಗುಡ್ಡದಲ್ಲಿ ಶೂಟೌಟ್ ಮಾಡಿ ಯುವಕನ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಗೆ ಮುನ್ನ ಕಳ್ಳತನ ಮಾಡಿದ್ದ ಆರೋಪಿಗಳಿಂದ ಚಿನ್ನಾಭರಣ ಸೇರಿದಂತೆ ಒಟ್ಟು 22 ಲಕ್ಷದ 93 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ.
ಕಿರಣ್, ಮಂಜಾನಾಯ್ಕ, ಸಚಿನ್ ಹಾಗೂ ಕಾನೂನು ಸಂಘರ್ಷಕ್ಕೊಳಗಾಗಿದ್ದ ಬಾಲಕನನ್ನು ಬಂಧಿಸಲಾಗಿದೆ. ನಾಗರಕಟ್ಟೆ ಗ್ರಾಮದ ಚಂದ್ರನಾಯ್ಕನನ್ನು ಜುಲೈ 10 ರಂದು ಆರೋಪಿಗಳು ಸೂಳೆಕೆರೆ ಗುಡ್ಡದಲ್ಲಿ ಪಿಸ್ತೂಲ್ ನಿಂದ ಶೂಟೌಟ್ ಮಾಡಿ ಹತ್ಯೆ ಮಾಡಿದ್ದರು. ಈ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಚೇತನ್ ನನ್ನು ಈ ಹಿಂದೆಯೇ ಬಂಧಿಸಲಾಗಿತ್ತು.
ಧಾರವಾಡದ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ನಾಲ್ಕು ಕಳ್ಳತನ ಪ್ರಕರಣ ಬೇಧಿಸಿರುವ ಪೊಲೀಸರು, 19 ಲಕ್ಷದ 70 ಸಾವಿರ ರೂಪಾಯಿ ಮೌಲ್ಯದ 402 ಗ್ರಾಂ. ಬಂಗಾರದ ಆಭರಣಗಳು, 23 ಸಾವಿರ ರೂಪಾಯಿ ಮೌಲ್ಯದ 232 ಗ್ರಾಂ ಬೆಳ್ಳಿ, 1 ಲಕ್ಷ ರೂಪಾಯಿ ಮೌಲ್ಯದ ಎರಡು ಲ್ಯಾಪ್ ಟಾಪ್ ಗಳು, ಹತ್ತು ಸಾವಿರ ರೂಪಾಯಿ ಮೌಲ್ಯದ 2 ವಾಚ್ ಗಳು, 1, 50,000 ಮೌಲ್ಯದ ಪಿಸ್ತೂಲ್, 5 ಜೀವಂತ ಗುಂಡುಗಳು, ಕೃತ್ಯ ಎಸಗಲು ಬಳಸಿದ್ದ 40 ಸಾವಿರ ರೂಪಾಯಿ ಮೌಲ್ಯದ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಹನುಮಂತರಾಯ ಮಾಹಿತಿ ನೀಡಿದರು.