ದಾವಣಗೆರೆ: ನಾಳೆ ನಡೆಯುವ ಮೋದಿ ಮಹಾಸಂಗಮಕ್ಕೆ ಸುಮಾರು 4 ಲಕ್ಷ ಜನ ಬರುವ ನಿರೀಕ್ಷೆಯಿದೆ ಎಂದು ದಾವಣಗೆರೆಯಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಹೇಳಿದರು. ಮಹಾಸಂಗಮ ಸಮಾವೇಶ ಹಿನ್ನೆಲೆಯಲ್ಲಿ ಪರಿಶೀಲನೆ ಬಳಿಕ ಮಾತನಾಡಿದ ಅಲೋಕ್ ಕುಮಾರ್, ಸುಮಾರು 10 ಸಾವಿರ ಬಸ್ ಬರುವ ನಿರೀಕ್ಷೆಯಿದೆ. ಭದ್ರತಾ ದೃಷ್ಟಿಯಿಂದ 2500 ಸಿಬ್ಬಂದಿ ನೇಮಕ ಮಾಡಲಾಗಿದೆ. 7 ಎಸ್ಪಿ, ಸಾಕಷ್ಟು ಪ್ರಮಾಣದಲ್ಲಿ ಎಎಸ್ಪಿ, ಡಿವೈಎಸ್ಪಿ, 600 ಮಂದಿ ಟ್ರಾಫಿಕ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಈ ಹಿಂದೆ ನಡೆದ ಸಮಾವೇಶದಲ್ಲಿ ಟ್ರಾಫಿಕ್ ಸಮಸ್ಯೆ ಆಗಿತ್ತು. ಆ ಕಾರಣದಿಂದಾಗಿ ಈ ಬಾರಿಯ ಹೈವೇಲಿ ಟ್ರಾಫಿಕ್ ಜಾಮ್ ಆಗಬಾರದು ಎಂದು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಪೊಲೀಸ್ ಉಪ ಮಹಾನಿರೀಕ್ಷಕ ತ್ಯಾಗರಾಜನ್ ಅವರ ನೇತೃತ್ವದಲ್ಲಿ ಸಕಲ ಭದ್ರತೆ ಮಾಡಲಾಗಿದ್ದು, ಪಾರ್ಕಿಂಗ್ಗಾಗಿ ಮೂರು ಕಡೆ ವ್ಯವಸ್ಥೆ ಮಾಡಲಾಗಿದೆ. ಕೊಂಡಜ್ಜಿ, ಕುಂದವಾಡ, ಬಾಡಾ ಕ್ರಾಸ್ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಬೇರೆ ಕಡೆಯಿಂದ ಬರುವವರಿಗೂ ಎಲ್ಲಾ ರೀತಿಯ ಡೈವರ್ಷನ್ ಮಾಡಲಾಗಿದೆ. ನಾಳೆ ಪಿಯುಸಿ ಮಕ್ಕಳ ಪರೀಕ್ಷೆ ಇರುವ ಹಿನ್ನೆಲೆಯಲ್ಲಿ ಅವರಿಗೆ ಯಾವುದೇ ಸಮಸ್ಯೆ ಆದಲ್ಲಿ ನಮಗೆ ತಿಳಿಸಿದರೇ ನಮ್ಮ ವಾಹನದಲ್ಲೇ ವ್ಯವಸ್ಥೆ ಮಾಡಲಾಗುವುದು. ಅದಕ್ಕೂ ಮುನ್ನ ಅವರೇ ಬೇಗ ಮನೆ ಬಿಟ್ಟು ಪರೀಕ್ಷಾ ಕೇಂದ್ರಕ್ಕೆ ತೆರಳಿದರೇ ಒಳ್ಳೆಯದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಹೇಳಿದರು.
ಜನಪ್ರತಿನಿಧಿ ಕಾಯ್ದೆ 1951 ಪ್ರಕಾರ ರಾಹುಲ್ ಗಾಂಧಿ ಅನರ್ಹ, ತಕ್ಕಪಾಠವಾಗಿದೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ : ಜನಪ್ರತಿನಿಧಿ ಕಾಯ್ದೆ 1951 ಪ್ರಕಾರ ರಾಹುಲ್ ಗಾಂಧಿ ಅನರ್ಹಗೊಂಡಿದ್ದಾರೆ. ಒಬ್ಬ ಚುನಾಯಿತ ಪ್ರತಿನಿಧಿ ಜವಾಬ್ದಾರಿಯತವಾಗಿ ಮಾತನಾಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು ಯಾರೇ ಚುನಾಯಿತ ಪ್ರತಿನಿಧಿ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಈ ರೀತಿ ಮಾತನಾಡುವ ನಾಯಕರಿಗೆ ತಕ್ಕಪಾಠವಾಗಿದೆ ಎಂದರು.
ಇನ್ನು ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭ ಸ್ಥಳ ಹಾಗೂ ವೇದಿಕೆಯನ್ನು ಪರಿಶೀಲನೆ ಮಾಡಿದ ಸಂಸದೆ ಶೋಭಾ ಕರದ್ಲಾಂಜೆಯವರು ನಮ್ಮ ದಾವಣಗೆರೆ ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಸಿದ್ಧವಾಗಿದೆ. ಜೊತೆಗೆ ಇಲ್ಲಿನ ತಿಂಡಿಗಳಾದ ರೊಟ್ಟಿ, ಚಟ್ನಿ, ಬೆಣ್ಣೆ ದೋಸೆ ಸಿದ್ಧವಾಗಿದೆ. ರಾಜ್ಯಾದ್ಯಂತ ವಿಜಯ ಸಂಕಲ್ಪಯಾತ್ರೆ ಅದ್ಧೂರಿಯಾಗಿ ನಡೆದಿದೆ. ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿ ವೇಗ ಸಿಕ್ಕಿದೆ. ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಳೆ ಲಕ್ಷಾಂತರ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ನಾಳೆ ರೋಡ್ ಶೋ ಇಲ್ಲ. ಇದು ಕರ್ನಾಟಕದಲ್ಲಿ ಮೊದಲ ಬಾರಿಗೆ ಜನರ ಮಧ್ಯದಿಂದ ಪ್ರಧಾನಿ ನರೇಂದ್ರ ಮೋದಿ ಅವರು ವೇದಿಕೆ ಕಡೆ ಆಗಮಿಸಲಿದ್ದಾರೆ ಎಂದರು.
ಇದನ್ನೂ ಓದಿ :ದಾವಣಗೆರೆ ಮಹಾಸಂಗಮ: ಜನರ ಮಧ್ಯದಲ್ಲಿ ವೇದಿಕೆಗೆ ಆಗಮಿಸಲಿದ್ದಾರೆ ಪ್ರಧಾನಿ ಮೋದಿ... ಹೇಗಿದೆ ಗೊತ್ತಾ ಬಿಗಿ ಭದ್ರತೆ?