ದಾವಣಗೆರೆ : ಪಿಎಸ್ಐ ಹಗರಣ ಬಳಿಕ ಪೊಲೀಸ್ ಇಲಾಖೆಯಿಂದ ಮೂರು ವರ್ಷಗಳಿಂದ ಖಾಲಿ ಇರುವ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಿಲ್ಲ. ಅದ್ರೆ ಇದೀಗ ಅ ಯುವಕರ ವಯೋಮಿತಿ ಮೀರಿದ ಬಳಿಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಕರೆದಿದ್ದು ಈ ಯುವಕರ ಕೆಂಗಣ್ಣಿಗೆ ಗುರಿಯಾಗಿದೆ.
ಪೊಲೀಸ್ ಇಲಾಖೆ ಸೇರಬೇಕು, ಸೇವೆ ಸಲ್ಲಿಸಬೇಕೆಂಬುದು ಲಕ್ಷಾಂತರ ಯುವಕರ ಕನಸು. ಈ ಕನಸನ್ನು ಬೆನ್ನುಹತ್ತಿರುವ ಈ ಯುವಕರು ಹಗಲು ರಾತ್ರಿ ಎನ್ನದೆ ತರಬೇತಿ ಪಡೆದು ಓದುತ್ತಿದ್ದಾರೆ. ಆದರೆ, ಕಳೆದ ಎರಡು ದಿನಗಳ ಹಿಂದೆ ರಾಜ್ಯ ಸರ್ಕಾರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಇದು ಕಾನ್ಸ್‌ಟೇಬಲ್ ಆಗಬೇಕು ಎಂದು ಕನಸನ್ನು ಕಂಡಿದ್ದ ಲಕ್ಷಾಂತರ ಯುವಕರಿಗೆ ತಣ್ಣೀರೆರಚಿದಂತಾಗಿದೆ.
ವಯೋಮಿತಿ ಸಡಿಲಿಸುವಂತೆ ಒತ್ತಾಯ.. ರಾಜ್ಯಪತ್ರದಲ್ಲಿ ಅಧಿಕೃತವಾಗಿ ಶಸ್ತ್ರಾಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಗೆ 3064 ಹುದ್ದೆಗಳನ್ನು ಕರೆದಿದ್ದು ಎರಡು ವರ್ಷಗಳಿಂದ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಸರಿಯಾದ ನೇಮಕಾತಿ ಪ್ರಕ್ರಿಯೆ ಇಲ್ಲದೆ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಈಗಿನ ನೇಮಕಾತಿ ಅಧಿಸೂಚನೆ ಶಾಕ್ ತಂದಿದೆ. ಈ ಅಧಿಸೂಚನೆಯಲ್ಲಿ 31/10/22ಕ್ಕೆ ಪುರುಷ ಹಾಗೂ ತೃತೀಯ ಲಿಂಗಿಗಳಿಗೆ 18 ವರ್ಷ ತುಂಬಿರಬೇಕು ಹಾಗೂ ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳಿಗೆ 27 ವರ್ಷ, ಸಾಮಾನ್ಯ 25 ವರ್ಷ ವಯಸ್ಸು ಮೀರಿರಬಾರರು ಎಂದು ವಯೋಮಿತಿಯನ್ನು ನಿರ್ಧರಿಸಿದೆ. ಇದು ಈ ಅಭ್ಯರ್ಥಿಗಳಿಗೆ ನುಂಗಲಾರದ ತುತ್ತಾಗಿದೆ. ಹಾಗಾಗಿ ನಮಗೆ ವಯೋಮಿತಿಯನ್ನು ಸಡಿಲಿಕೆ ಮಾಡಬೇಕು ಎಂದು ದೇವರಾಜ್ ಎಂಬ ಯುವಕ ಸರ್ಕಾರಕ್ಕೆ, ಗೃಹ ಸಚಿವರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಕೊರೊನಾದಿಂದ ಕಳೆದ ಎರಡು ವರ್ಷಗಳಿಂದ ಪೊಲೀಸ್ ನೇಮಕಾತಿ ಸರಿಯಾಗಿ ನಡೆದಿಲ್ಲ. ಈ ಬಾರಿ 3 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಕರೆದಿದ್ದು, ವಯೋಮಿತಿ ಕಡಿಮೆ ಮಾಡಿದ್ದಾರೆ. ಇದರಿಂದ ನಾಲ್ಕೈದು ವರ್ಷಗಳಿಂದ ಕಾನ್ಸ್‌ಟೇಬಲ್ ಹುದ್ದೆಗೆ ತರಬೇತಿ ಪಡೆದು ಓದುತ್ತಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. ಅಲ್ಲದೆ ಸಂಬಂಧಪಟ್ಟ ಅಧಿಕಾರಿ ಹಾಗೂ ಗೃಹ ಸಚಿವರಿಗೆ ಈಗಾಗಲೇ ಮನವಿ ಮಾಡಲಾಗಿದೆ. ಆದರೂ ಕೂಡ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಕೇವಲ ಪೊಲೀಸ್ ಇಲಾಖೆ ಅಲ್ಲದೆ ಎಫ್ಡಿಎ ಮತ್ತು ಎಸ್ಡಿಎ, ಕಂದಾಯ ಇಲಾಖೆಯ ಹುದ್ದೆಗಳನ್ನು ಭರ್ತಿ ಮಾಡಬೇಕು. ಅಲ್ಲದೆ ಕಾನ್ಸ್‌ಟೇಬಲ್ ಹುದ್ದೆಗಳಿಗೆ ವಯೋಮಿತಿ ಕಡಿಮೆ ಮಾಡಲಾಗಿದೆ. ಕಷ್ಟಪಟ್ಟು ಓದಿದ್ವಿ, ಅದ್ರೆ ನಮ್ಮ ವಯೋಮಿತಿ ಮುಗಿದಿದೆ. ಹೀಗೆ ಸರ್ಕಾರ ನಮಗೆ ಅನ್ಯಾಯ ಮಾಡ್ತಿದೆ ಎಂದು ಯುವಕ ಲೋಹಿತ್ ಬೇಸರ ವ್ಯಕ್ತಪಡಿಸಿದರು.
ಒಟ್ಟಾರೆಯಾಗಿ ಕೋವಿಡ್ ನೆಪ ಹೇಳಿ ಕಳೆದ ಎರಡು ವರ್ಷಗಳಿಂದ ನೇಮಕಾತಿ ಸರಿಯಾಗಿ ನಡೆಸದ ರಾಜ್ಯ ಸರ್ಕಾರ, ಈಗ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಆದರೆ, ಅಧಿಸೂಚನೆಯಲ್ಲಿ ನೀಡಿದ ವಯೋಮಿತಿಯಿಂದ ಸಾಕಷ್ಟು ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ಸರ್ಕಾರದ ಬಳಿ ನೂರಾರು ಅಭ್ಯರ್ಥಿಗಳು ಮನವಿ ಮಾಡಿಕೊಂಡಿದ್ದಾರೆ. ಅದರಲ್ಲೂ ಈಗ ಅಧಿವೇಶನ ಇರುವ ಹಿನ್ನೆಲೆ ಇದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ: ಅರ್ಜಿ ಆಹ್ವಾನ... ತೃತೀಯ ಲಿಂಗಿಗಳಿಗೆ ಮೊದಲ ಬಾರಿ ಮೀಸಲಾತಿ