ಹರಿಹರ : ನಗರದ ಗೌಸಿಯಾ ಕಾಲೋನಿ ನಿವಾಸಿ 30 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಡಪಟ್ಟಿದ್ದು, ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 15ಕ್ಕೇರಿದೆ.
ಸೋಂಕಿತ ವ್ಯಕ್ತಿಯು ಶೀತ ಮತ್ತು ಜ್ವರ ಕಾಣಿಸಿದ ಹಿನ್ನೆಲೆ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದರು. ವೈದ್ಯರು ಆತನನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗೆಂದು ಕಳುಹಿಸಿದ್ದಾರೆ. ಜೂನ್ 30ರಂದು ವ್ಯಕ್ತಿಯ ಗಂಟಲು ದ್ರವ ಸಂಗ್ರಹಿಸಲಾಗಿತ್ತು.
ಆನಂತರ ಜುಲೈ 4ರಂದು ವರದಿ ಬಂದಿದ್ದು, ಆತನಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಈ ಹಿನ್ನೆಲೆ ಸೋಂಕಿತನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿತ ಗರ್ಭಿಣಿ ಸೇರಿ 7 ಜನರ ಗಂಟಲು ದ್ರವ ಸಂಗ್ರಹಿಸಿ ಅವರನ್ನೆಲ್ಲಾ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿದೆ.
ಅಲ್ಲದೇ, ಸೋಂಕಿತನ ಮನೆಯ ಸುತ್ತ ಮುತ್ತಲಿನ 22 ಮನೆ ಹಾಗೂ 89 ನಿವಾಸಿಗಳ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ನಿಷೇಧಿತ ಪ್ರದೇಶವನ್ನು ಸಾನಿಟೈಸ್ ಮಾಡಿ ಸ್ವಚ್ಛಗೊಳಿಸಲಾಗಿದೆ.