ದಾವಣಗೆರೆ : ಮಠದ ಕೋಣೆಯಲ್ಲಿದ್ದ ಪುಸ್ತಕದಲ್ಲಿ ಅಖಂಡ ಭಾರತದ ಭೂಪಟ ವೀಕ್ಷಿಸಿ ಅಮಿತ್ ಶಾ ಭಾವುಕರಾಗಿ ಕಣ್ಣೀರು ಹಾಕಿದ್ದರು ಎಂದು ಹರಿಹರದ ಪಂಚಮಸಾಲಿ ಮಠದ ವಚನಾನಂದ ಶ್ರೀ ಹೇಳಿಕೆ ನೀಡಿದರು. ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಪಂಚಮಸಾಲಿ ಮಠದಲ್ಲಿ ಮಂಗಳವಾರ ಮಾತನಾಡಿದ ಅವರು ಈ ವರ್ಷ ಎರಡು ಪಕ್ಷದಿಂದ ಪಂಚಮಸಾಲಿಗಳನ್ನು ಗುರುತಿಸಿ ಹೆಚ್ಚು ಟಿಕೆಟ್ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಮಠಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ್ದರು ಎಂದರು.
ಇದನ್ನೂ ಓದಿ : ಬಜರಂಗದಳ ಕರ್ನಾಟಕದ ಅಸ್ಮಿತೆ, ತಾಕತ್ತಿದ್ದರೆ ಬ್ಯಾನ್ ಮಾಡಿ ನೋಡಿ: ತೇಜಸ್ವಿ ಸೂರ್ಯ ಸವಾಲ್
ಅಮಿತ್ ಶಾ ರವರು ಮಠಕ್ಕೆ ಆಗಮಿಸಿದ್ದಾಗ ಅವರಿಗೆ ಧ್ಯಾನ ಮಂದಿರ ಭಾವನೆ ಬಂದಿತ್ತು, ಅವರು ಮಠದ ಅ ಕೋಣೆಯಲ್ಲಿದ್ದ ಕುಂಡಲಿ ಚಕ್ರವನ್ನು ವೀಕ್ಷಿಸಿದ್ದರು, ಲಿಂಗಾಯತರ ಬಗ್ಗೆ ಕುಂಡಲಿ ಯೋಗ ಏನ್ ಹೇಳುತ್ತೆ ಎಂದು ಶಾ ಪ್ರಶ್ನಿಸಿದರು. ಬಳಿಕ ಅಲ್ಲೇ ಇದ್ದ ಕಾಫಿ ಟೇಬಲ್ ಪುಸ್ತಕವನ್ನು ತಿರುವಿ ಹಾಕಿದರು. ಆ ವೇಳೆ ಪುಸ್ತಕದಲ್ಲಿದ್ದ ಅಖಂಡ ಭಾರತದ ಭೂಪಟ ವೀಕ್ಷಿಸಿ ಭಾವುಕರಾದ ಅಮಿತ್ ಶಾ ನನ್ನ ಮುಖವನ್ನು ನೋಡಿ ಕಣ್ಣೀರು ಹಾಕಿದರು. ಅಖಂಡ ಭಾರತದ ಭೂಪಟ ಚಿತ್ರದೊಂದಿಗೆ ಪುಸ್ತಕದಲ್ಲಿರುವ ಚಿತ್ರಗಳ ಬಗ್ಗೆ ಶಾ ಅವರಿಗೆ ವಿಶ್ಲೇಷಣೆ ಮಾಡಿದೆ ಎಂದು ಶ್ರೀಗಳು ಹೇಳಿದರು.
ಇದನ್ನೂ ಓದಿ : ಬಜರಂಗದಳ ನಮ್ಮ ಸಂಸ್ಕೃತಿ, ಅವ್ರು ಧರ್ಮ ರಕ್ಷಣೆ ಮಾಡುವವರು: ಸಿಎಂ ಬೊಮ್ಮಾಯಿ
ಅಮಿತ್ ಶಾ ನಮ್ಮೊಂದಿಗೆ ಕಾಲ ಕಳೆದ ಸಂದರ್ಭದಲ್ಲಿ ಹೆಚ್ಚು ಆಧ್ಯಾತ್ಮದ ಬಗ್ಗೆ ಚರ್ಚಿಸಿದರು. ನಾನು ಒಬ್ಬ ರಾಜಕಾರಣಿಯೊಂದಿಗೆ ನಾವು ಕುಳಿತಿದ್ದೇವೆ ಎಂದೆನಿಸಲಿಲ್ಲ. ಇದಲ್ಲದೆ ಕೋಣೆಯಲ್ಲಿದ್ದ ಶ್ರೀ ಚಕ್ರ ಯಂತ್ರ ಅವರಿಗೆ ಹೆಚ್ಚು ಆಕರ್ಷಿಸಿದ ಬೆನ್ನಲ್ಲೇ ಅದನ್ನು ಅವರಿಗೆ ಉಡುಗೊರೆಯಾಗಿ ನೀಡಲಾಯಿತು ಎಂದರು. ಇನ್ನು ರಾಹುಲ್ ಗಾಂಧಿ ಕೂಡ ಮಠಕ್ಕೆ ಭೇಟಿ ನೀಡಿ ಕೆಲ ಕಾಲ ಚರ್ಚೆ ನಡೆಸಿದರು. ಬಳಿಕ ಸಾಕಷ್ಟು ಮಾಹಿತಿ ಕಲೆ ಹಾಕಿದರು. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಬೇಕೆಂದು ಮನವಿ ಮಾಡಿದರು. ಅದರಂತೆ ನಾನು ಆಶೀರ್ವಾದ ಮಾಡುವುದಾಗಿ ಹೇಳಿದ್ದೇನೆ ಎಂದು ಶ್ರೀಗಳು ತಿಳಿಸಿದರು.
ಹಣದ ಅಮಿಷಕ್ಕೊಳಗಾಗದೆ ಮತದಾನ ಮಾಡಿ : ದುಡ್ಡಿಗಾಗಿ ನಮ್ಮನ್ನು ನಾವು ಮಾರಿಕೊಳ್ಳಬಾರದು, ಪ್ರತಿಯೊಬ್ಬರೂ ಮತದಾನವನ್ನು ದಾನದ ರೂಪದಲ್ಲಿ ಆಮಿಷಕ್ಕೆ ಒಳಗಾಗದಂತೆ ಮಾತದಾನ ಮಾಡಿ. ಮತದಾನ ಎಂದರೆ ಅದು ಒಂದು ದಾನ, ಹಣ ತೆಗೆದುಕೊಂಡು ಮತ ಕೊಡುವುದು ಆಗಬಾರದು. ಹಣದ ಆಸೆಗೆ ಒಳಪಟ್ಟರೆ ಅದು ದಾನ ಆಗುವುದಿಲ್ಲ ಅದು ಕರ್ಮ ಆಗುತ್ತೆ ಎಂದು ಮತದಾನದ ಬಗ್ಗೆ ಹರಿಹರದ ವಚನಾನಂದ ಸ್ವಾಮೀಜಿ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಿದರು.
ಇದನ್ನೂ ಓದಿ : ಲಿಂಗಾಯತ ಕೋಟೆಯಲ್ಲಿ ರಾಜಾಹುಲಿ ಅಬ್ಬರ: ಕಾಂಗ್ರೆಸ್ ವಿರುದ್ಧ ಗುಡುಗಿದ ಬಿಎಸ್ವೈ