ದಾವಣಗೆರೆ: ವಿದ್ಯಾರ್ಥಿಗಳಿಗೆ ಗುರುವಿನ ಸ್ಥಾನದಲ್ಲಿ ನಿಂತು ವಿದ್ಯಾದಾನ ಮಾಡಬೇಕಾಗಿದ್ದ ಶಿಕ್ಷಕನೊಬ್ಬ ವಿದ್ಯಾರ್ಥಿನಿಯ ಮೇಲೆ ಶಾಲೆಯಲ್ಲೇ ನಿರಂತರ ಅತ್ಯಚಾರ ಎಸಗಿರುವ ಆರೋಪ ಕೇಳಿ ಬಂದಿದ್ದು, ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿರುವ ಶಾಲೆಯೊಂದರಲ್ಲಿ ಈ ದುರ್ಘಟನೆ ನಡೆದಿದೆ.
ಈ ಘಟನೆ ನಡೆದು ವಾರದ ಬಳಿಕ ವಿದ್ಯಾರ್ಥಿ ತನ್ನ ಪೋಷಕರ ಬಳಿ ಹೇಳಿ ಕೊಂಡಿದ್ದಾಳೆ. ನಂತರ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳಾ ಠಾಣೆಯ ಪೊಲೀಸರು ಬಾಲಕಿಯ ಹೇಳಿಕೆಯನ್ನು ಪಡೆದು ಶಾಲೆಯಲ್ಲಿದ್ದ ಶಿಕ್ಷಕನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಬಾಲಕಿಯ ಅನಾರೋಗ್ಯದಿಂದ ಘಟನೆ ಬೆಳಕಿಗೆ: ಈ ಘಟನೆ ನಡೆದು ಒಂದು ವಾರದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಅತ್ಯಾಚಾರ ಎಸಗಿದ ಕೆಲ ದಿನಗಳ ಬಳಿಕ ಬಾಲಕಿ ಅನಾರೋಗ್ಯಕ್ಕೆ ಒಳಗಾಗಿದ್ದಾಳೆ. ಅನಾರೋಗ್ಯಕ್ಕೀಡಾದರೂ ಕೂಡ ಶಿಕ್ಷಕನ ಬೆದರಿಕೆಗೆ ಹೆದರಿ ಬಾಲಕಿ ಈ ವಿಚಾರವನ್ನು ಪೋಷಕರ ಬಳಿ ಬಾಯಿ ಬಿಟ್ಟಿರಲಿಲ್ಲ.
ಆದರೆ, ಪೋಷಕರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದಾಗ ವೈದ್ಯರು ಈ ಸೂಕ್ಷ್ಮ ಘಟನೆಯನ್ನು ಬಾಲಕಿಯ ಪೋಷಕರಿಗೆ ತಿಳಿಸಿದ್ದಾರೆ. ನಂತರ ಬಾಲಕಿ ಈ ಬಗ್ಗೆ ಪೋಷಕರಲ್ಲಿ ಹೇಳಿಕೊಂಡಿದ್ದಾಳೆ. ಕೂಡಲೇ ಪೋಷಕರು ಹಾಗೂ ವೈದ್ಯರು ಮಹಿಳಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಷಕರು ಮತ್ತು ವೈದ್ಯರ ನೀಡಿದ ಮಾಹಿತಿ ಮೇರೆಗೆ ಶಿಕ್ಷಕನನ್ನು ಮಹಿಳಾ ಪೊಲೀಸರು ಬಂಧಿಸಿದ್ದಾರೆ.
ಈಟಿವಿ ಭಾರತದ ಜೊತೆಗೆ ದೂರವಾಣಿಯಲ್ಲಿ ಪ್ರತಿಕ್ರಿಯಿಸಿದ ಪಿಐ ನೂರ್ ಅಹ್ಮದ್ "ಈ ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಹೇಳಿಕೆಯನ್ನು ಪಡೆದು ಶಿಕ್ಷಕನನ್ನು ಬಂಧಿಸಿದ್ದೇವೆ. ಪೋಷಕರು ದೂರು ಸಲ್ಲಿಸಿದ್ದರಿಂದ ಎಫ್ಐಆರ್ ದಾಖಲಿಸಿಕೊಂಡು, ಶಾಲೆಯಿಂದಲೇ ಶಿಕ್ಷಕನನ್ನು ಬಂಧಿಸಿದ್ದೇವೆ, ಪ್ರಸ್ತುತ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತನಿಖೆ ಮುಂದುವರೆದಿದೆ" ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಯುಪಿಯಲ್ಲಿ ದಲಿತ ಮಹಿಳೆಯ ಅತ್ಯಾಚಾರ, ಬರ್ಬರ ಹತ್ಯೆ: ಬಿಜೆಪಿ ಸರ್ಕಾರದ ವಿರುದ್ಧ ಅಖಿಲೇಶ್ ಆಕ್ರೋಶ