ಹರಿಹರ( ದಾವಣಗೆರೆ ): ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ವಿಶ್ವಶ್ರೇಷ್ಠ ಸಂವಿಧಾನಕ್ಕೆ ಭಾರತೀಯ ಪ್ರಜೆಗಳಾದ ನಾವೆಲ್ಲ ತಲೆಬಾಗಬೇಕು ಎಂದು ಜಿಲ್ಲಾ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕ ಎನ್. ರುದ್ರಮುನಿ ಹೇಳಿದರು.
ನಗರದ ಅಕ್ಷಯ ಆಸ್ಪತ್ರೆಯ ಮುಂಭಾಗದಲ್ಲಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಅಕ್ಷಯ ಆಸ್ಪತ್ರೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ೬೩ ನೇ ಪರಿನಿರ್ವಾಣ ದಿನದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತಮಾಡಿ, ನಾವೆಲ್ಲರೂ ಭಾರತೀಯರು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಏಕೆಂದರೆ ಇಲ್ಲಿ ನಮ್ಮ ಮಹಾನ್ ನಾಯಕ ಅಂಬೇಡ್ಕರ್ ರಚಿಸಿದ ಸಂವಿಧಾನದ ಅಡಿಯಲ್ಲಿ ನಾವು ಜೀವಿಸುತ್ತಿದ್ದೇವೆ. ಸಂವಿಧಾನ ನಮಗೆ ಎಲ್ಲವನ್ನೂ ನೀಡಿದೆ ಎಂದರು.
ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಗ್ರಾಮಾಂತರ ಠಾಣೆಯ ಪಿಎಸ್‌ಐ ಡಿ. ರವಿಕುಮಾರ್, ಯುವಕರು ಇಂದಿನ ದಿನಗಳಲ್ಲಿ ಮೋಜು ಮಸ್ತಿಗಾಗಿ ಅನೇಕ ರೀತಿಯ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಇದರಿಂದ ಅವರ ಜೀವನವನ್ನೇ ಹಾಳು ಮಾಡಿಕೊಳ್ಳುವುದರ ಜೊತೆಗೆ ಪೋಷಕರಿಗೂ ಸಹ ತೊಂದರೆ ಕೊಡುತ್ತಿದ್ದಾರೆ ಎಂದು ಯುವಕರಿಗೆ ಎಚ್ಚರಿಕೆಯ ಮಾತುಗಳನ್ನು ಹೇಳಿದರು.