ದಾವಣಗೆರೆ: ನಟಸಾರ್ವಭೌಮ ಡಾ ರಾಜ್ ಕುಮಾರ್ ವಿಧಿವಶರಾದಾಗ ನೇತ್ರದಾನ ಮಾಡಿದಂತೆ ನಟ ಪುನೀತ್ ರಾಜ್‍ಕುಮಾರ್ ಕೂಡ ನೇತ್ರಾದಾನ ಮಾಡಿ ನಾಲ್ಕು ಜನರಿಗೆ ಆಸರೆಯಾಗಿದ್ದರು. ಆದರೆ ದಾವಣಗೆರೆಯಲ್ಲಿ ನಟ ಪುನೀತ್ ಅವರಿಗೆ ಅವರ ಅಭಿಮಾನಿಗಳು ವಿನೂತನ ರೀತಿಯಲ್ಲಿ ಅವರ ಪುಣ್ಯಸ್ಮರಣೆ ದಿನ ಗೌರವ ಸಲ್ಲಿಸಿದ್ದಾರೆ. ಇಡೀ ಗ್ರಾಮವೇ ಅವರ ನೆನಪಿನಲ್ಲಿದ್ದು, ಆ ಗ್ರಾಮದ ಪ್ರತಿಯೊಬ್ಬರು ನೇತ್ರದಾನಕ್ಕೆ ನೋಂದಣಿ ಮಾಡಲು ಮುಂದಾಗಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನ್ನಗಲಿ ಇಂದಿಗೆ ಒಂದು ವರ್ಷ. ಅವರ ಪುಣ್ಯಸ್ಮರಣೆ ದಿನವೇ ದಾವಣಗೆರೆ ತಾಲೂಕಿನ ಚಟ್ಟೋಬನಹಳ್ಳಿ ಇಡೀ ಗ್ರಾಮದ ಜನರು ಅಪ್ಪು ನೇತ್ರದಾನ ಮಾಡಿದಂತೆ ನೇತ್ರದಾನ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ. ಚಟ್ಟೋಬನಹಳ್ಳಿ ಗ್ರಾಮದಲ್ಲಿ ಒಟ್ಟು 120 ಮನೆಗಳಿದ್ದು, ಬರೋಬ್ಬರಿ 500 ಜನ ಈ ಗ್ರಾಮದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ಗ್ರಾಮದ ಯುವಕರು, ವಯಸ್ಕರು, ಮಕ್ಕಳು ಮಹಿಳೆಯರು ಹೀಗೆ ಪ್ರತಿಯೊಬ್ಬರು ಕೂಡ ದಾವಣಗೆರೆಯ ಬಾಪೂಜಿ ಮೆಡಿಕಲ್ ಕಾಲೇಜಿನ ಐ ಬ್ಯಾಂಕ್ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.
ಅಭಿಮಾನಿಗಳನ್ನು ಅಗಲಿರುವ ನಟ ಅಪ್ಪುಗೆ ಗೌರವ ಸಲ್ಲಿಸಲು ಬಂಜಾರ ಸಮುದಾಯದ 500 ಜನರ ಪೈಕಿ ಈಗಾಗಲೇ 60 ರಿಂದ 70 ಜನ ಈಗಾಗಲೇ ನೇತ್ರದಾನ ಮಾಡಲು ನೊಂದಣಿಯನ್ನು ಮಾಡಿಕೊಂಡು ಚಟ್ಟೋಬನಹಳ್ಳಿ ತಾಂಡದ ಯುವಕರು ಮಾದರಿ ಆಗಿದ್ದಾರೆ. ಎರಡು ದಿನಗಳಲ್ಲಿ ಗ್ರಾಮದ ಎಲ್ಲರೂ ನೋಂದಣಿ ಮಾಡಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇದಲ್ಲದೆ ಇಡೀ ಗ್ರಾಮದಲ್ಲಿ ಅಪ್ಪು ಭಾವಚಿತ್ರ ಇಟ್ಟು ದೀಪ ಹಚ್ಚುವ ಮೂಲಕ ನಿತ್ಯ ಪೂಜಿಸಲಾಗುತ್ತಿದೆ.
ಪುನೀತ್ ಅಗಲಿಕೆಯಿಂದ ಆಘಾತಕ್ಕೊಳಗಾಗಿದ್ದ ಚಟ್ಟೋಬನಹಳ್ಳಿ ಗ್ರಾಮಸ್ಥರು ಒಂದು ವಾರ ಶೋಕದಲ್ಲಿ ಮುಳುಗಿದ್ದರು. ನಟ ಪುನೀತ್ ನೇತ್ರದಾನ ಮಾಡಿದ್ದರಿಂದ ಅವರ ಅಭಿಮಾನಿಗಳು ಕೂಡ ಅವರ ಆದರ್ಶ ಮೈಗೂಡಿಸಿಕೊಂಡು, ನೇತ್ರದಾನ ಮಾಡಲು ನೋಂದಣಿ ಮಾಡಿಕೊಳ್ಳಲು ಸಿದ್ಧತೆ ನಡೆಸಿ ಪುನೀತ್ಗೆ ನಮನ ಸಲ್ಲಿಸಿದ್ದಾರೆ.
ನಟ ಪುನೀತ್ ಅವರು ಅನೇಕ ಜನರಿಗೆ ಸಹಾಯ ಮಾಡಿದ್ದಲ್ಲದೆ ಕಣ್ಣು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು. ಕಣ್ಣು ದಾನ ಮಾಡಿದ್ದಕ್ಕೆ ಅವರ ದಾರಿಯಲ್ಲೇ ಅವರ ಅಭಿಮಾನಿಗಳು ಸಾಗುತ್ತಿದ್ದು, ಕಣ್ಣುಗಳು ಮಣ್ಣಿನಲ್ಲಿ ಮಣ್ಣಾಗುವ ಬದಲು ಅಪ್ಪು ಹೇಳಿದಂತೆ ಬೇರೆಯವರಿಗೆ ದೃಷ್ಟಿಯಾಗಬಹುದು. ನೇತ್ರದಾನ ಮಾಡಲು ಅಪ್ಪು ಅವರೇ ನಮಗೆ ಸ್ಫೂರ್ತಿ ಎಂದು ಗ್ರಾಮಸ್ಥ ತಿಪ್ಪೇಶ್ ನಾಯ್ಕ್ ಹೇಳಿದ್ದಾರೆ.
ಒಟ್ಟಾರೆ ಪುಟ್ಟ ಗ್ರಾಮದಲ್ಲಿರುವ ಜನರು ಕಣ್ಣು ದಾನ ಮಾಡಿ ಬೇರೆಯವರಿಗೆ ಆದರ್ಶವಾಗಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ. 500 ಜನರಿಂದ ಕೂಡಿರುವ ಈ ಗ್ರಾಮದಲ್ಲಿಂದು ಪುಣ್ಯಸ್ಮರಣೆ ಮಾಡಿ ನೇತ್ರದಾನ ಮಾಡಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ.
ಇದನ್ನೂ ಓದಿ: ಮಗುವಾಗಿದ್ದಾಗಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಅಪ್ಪು.. ಒಂದೇ ಒಂದು ಚಿತ್ರದಲ್ಲಿ ರಾಜ್ಕುಮಾರ್ಗೆ ಅಳಿಯನಾಗಿದ್ದ ಪುನೀತ್!