ದಾವಣಗೆರೆ: ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ನಿರಾಕರಿಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸೂಚಿಸಿದ್ದಾರೆ.
ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆ ಕುರಿತು ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ”ಜನಸ್ನೇಹಿ ಆಡಳಿತ ಒಂದು ವರ್ಷ; ಸವಾಲುಗಳ ವರ್ಷ; ಪರಿಹಾರದ ಸ್ಪರ್ಶ” ನೇರ ಪ್ರಸಾರದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸರ್ಕಾರದ ಸಾಧನೆಯ ಕಿರುಹೊತ್ತಿಗೆ ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ 5 ತಂಡಗಳನ್ನು ರಚನೆ ಮಾಡಲಾಗುವುದು. ಈ ತಂಡಗಳು ಮೂರು ಸರದಿಯಲ್ಲಿ ಕೆಲಸ ಮಾಡುವುದರ ಜೊತೆಗೆ, ಪ್ರತಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳು ವಾಪಸ್ ಹೋಗದಂತೆ ಕಾರ್ಯ ನಿರ್ವಹಿಸುವವು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಕೋವಿಡ್ ರೋಗಿಗಳು ಆರೋಗ್ಯವಾಗಿದ್ದಾರೆ. ಯಾವುದೇ ಸಮಸ್ಯೆ ಇಲ್ಲ. ಅವರಿಗೆ ಅಗತ್ಯ ವೈದ್ಯಕೀಯ ಸೌಲಭ್ಯ, ಚಿಕಿತ್ಸೆ ಒದಗಿಸುವ ಮೂಲಕ ಗುಣಮುಖರನ್ನಾಗಿಸಲಾಗುತ್ತಿದೆ. ಕೊರೊನಾ ಹಿನ್ನೆಲೆ ಜಿಲ್ಲಾಡಳಿತ ಇನ್ನಷ್ಟು ಸಮರ್ಪಕ ಕೆಲಸ ನಿರ್ವಹಿಸಬೇಕಿದೆ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಬೆಡ್‍ಗೆ ತೊಂದರೆ ಇಲ್ಲ:
ರೋಗಿಗಳಿಗೆ ಬೆಡ್ ಇಲ್ಲ ಎನ್ನುವ ಪ್ರಶ್ನೆಯೇ ಇಲ್ಲ. ಸಾಕಷ್ಟು ವ್ಯವಸ್ಥಿತವಾಗಿ ಸನ್ನದ್ದರಾಗಿದ್ದೇವೆ. ಬೇರೆ ಆಸ್ಪತ್ರೆಗಳಿಗೆ ರೆಫರ್ ಮಾಡಿದ ಪ್ರಕರಣಗಳಲ್ಲಿ ಕೂಡ ಕೊರೊನಾ ರೋಗಿಗಳಿಗೆ ಸರ್ಕಾರವೇ ಹಣ ಭರಿಸುತ್ತದೆ ಈ ಬಗ್ಗೆ ಯಾವುದೇ ಅನುಮಾನ ಬೇಡ. ಎಬಿಆರ್ಕೆ ಆರೋಗ್ಯ ಯೋಜನೆಯಡಿ ಹಣ ಸಂದಾಯ ಮಾಡಲಾಗುತ್ತದೆ. ಯಾವುದೇ ಶುಲ್ಕ ನೀಡುವ ಅವಶ್ಯಕತೆ ಇಲ್ಲ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಉಸ್ತುವಾರಿ ಸಚಿವನಾಗಿ ಬಂದ ಸಂದರ್ಭದಲ್ಲಿ ಅನೇಕ ಮನವಿಗಳನ್ನು ರೈತರು ಹಾಗೂ ಕಾರ್ಮಿಕರು ನೀಡಿದ್ದರು. ಆ ವೇಳೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ. ದಾವಣಗೆರೆ ವಿಶೇಷವಾಗಿ ಮೆಕ್ಕೆಜೋಳ ಬೆಳೆಯುವ ಜಿಲ್ಲೆಯಾಗಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ರೂ. 5 ಸಾವಿರದಂತೆ ಸುಮಾರು ರೂ. 500 ಕೋಟಿ ರೂ. ಪ್ರೋತ್ಸಾಹ ಧನ ನೀಡಲಾಗಿದೆ. ಕೊರೊನಾ ಸಂದರ್ಭದಲ್ಲಿ ಲಾಕ್‍ಡೌನ್ ಹಿನ್ನೆಲೆಯಿಂದಾಗಿ ಹೂ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಆ ವೇಳೆ ಒಂದು ಹೆಕ್ಟೇರ್ ಗೆ ರೂ. 25 ಸಾವಿರ ಘೋಷಣೆ ಮಾಡಲಾಗಿದೆ. ಜೊತೆಗೆ ಆಟೋ ಟ್ಯಾಕ್ಸಿ ಚಾಲಕರು, ಕಾರ್ಮಿಕರು, ನೇಕಾರರು, ಸವಿತಾ ಸಮಾಜ, ನೇಕಾರರು ಸೇರಿದಂತೆ ಎಲ್ಲ ಸಮುದಾಯಗಳಿಗೆ ಆರ್ಥಿಕವಾಗಿ ಸಹಾಯ ಮಾಡುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ ಎಂದು ತಿಳಿಸಿದರು.