ದಾವಣಗೆರೆ : ಗೋಮಾಳ ಜಮೀನು ವಿಚಾರವಾಗಿ ಜಗಳವಾಗಿ ಅದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ದಾವಣಗೆರೆ ನಗರದ ಗಾಂಧಿನಗರದ ಸ್ಮಶಾನದ ರಸ್ತೆಯಲ್ಲಿ ಭಾನುವಾರ ನಡೆದಿದೆ. ನಡು ರಸ್ತೆಯಲ್ಲಿಯೇ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಮೈಲಾರಿ (28) ಕೊಲೆಯಾದ ಯುವಕ. ಮಲ್ಲಾ ಮೂರ್ತಪ್ಪ ಹಾಗು ರಕ್ಷಿತ ಸೇರಿದಂತೆ ಮತ್ತೋರ್ವ ಸೇರಿ ಕೊಲೆ ಮಾಡಿದ ಆರೋಪಿಗಳು.
ಮೂರು ಜನ ಯುವಕರು ಸೇರಿ ಚಾಕುನಿಂದ ಇರಿದು ಮೈಲಾರಿಯನ್ನು ಕೊಲೆ ಮಾಡಿದ್ದು, ಗಾಂಧಿ ನಗರ ಪೊಲೀಸ್ ಠಾಣೆಯ ಕೂಗಳತೆಯಲ್ಲಿಯೇ ಕೊಲೆಯಾಗಿರುವುದು ಜನರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ದಾವಣಗೆರೆ ತಾಲೂಕಿನ ಕಿತ್ತೂರು ಗ್ರಾಮದ ನಿವಾಸಿ ಮೃತ ಯುವಕ ಮೈಲಾರಿ ಗಾಂಧಿನಗರದಲ್ಲಿ ತಮ್ಮ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಿತ್ತೂರು ಗ್ರಾಮದಲ್ಲಿ ಮೈಲಾರ ಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಆರು ಎಕರೆ ಗೋಮಾಳ ಜಮೀನು ವಿಚಾರವಾಗಿ ಜಗಳವಾಗಿದ್ದು, ಕೊಲೆಯಲ್ಲಿ ಅಂತ್ಯವಾಗಿದ್ದು, ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಲಾರ ಲಿಂಗೇಶ್ವರ ದೇವಸ್ಥಾನ ಜಮೀನಿನಲ್ಲಿ ಉಳುಮೆ ಮಾಡುವಾಗ ನಡೆಯಿತು ಕೊಲೆ.. ಕಿತ್ತೂರು ಗ್ರಾಮದಲ್ಲಿ ಮೈಲಾರ ಲಿಂಗೇಶ್ವರ ದೇವಸ್ಥಾನದಲ್ಲಿ ಮೃತ ಮೈಲಾರಿಯವರ ತಂದೆ ಹಾಗು ಮೈಲಾರಿಯವರ ದೊಡ್ಡಪ್ಪ ಸೇರಿದಂತೆ ಆರೋಪಿಗಳಾದ ಮಲ್ಲಾ ಮೂರ್ತಪ್ಪ ಹಾಗೂ ರಕ್ಷಿತ್ ತಂದೆ ಇವರೆಲ್ಲ ಅಣ್ಣತಮ್ಮನ ಮಕ್ಕಳಾಗಿದ್ದು, ದೇವಸ್ಥಾನದ ಪೂಜಾರಿಗಳಾಗಿದ್ದಾರೆ. ಸಾಕಷ್ಟು ವರ್ಷಗಳಿಂದ ಮೈಲಾರ ಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಆರು ಎಕರೆ ಜಮೀನನ್ನು ಆರೋಪಿ ಮಲ್ಲಾ ಮೂರ್ತಪ್ಪ ಅವರ ತಂದೆಯವರು ಪೂಜಾರಿಯಾಗಿ ಸೇವೆ ಸಲ್ಲಿಸುತ್ತಿದ್ದರಿಂದ ಅವರೇ ಜಮೀನಿನ ಮೇಲೆ ಹಿಡಿತ ಸಾಧಿಸಿ ಉಳುಮೆ ಮಾಡ್ತಾ ಬಂದಿದ್ದಾರೆ.
ಬರೀ ನೀವೇ ಉಳುಮೆ ಮಾಡಿದ್ರೆ ಹೇಗೆ? ನಮಗೂ ಈ ಜಮೀನಿನಲ್ಲಿ ಉಳುಮೆ ಮಾಡಲು ಹಕ್ಕಿದೆ. ನಾವು ಈ ದೇವಾಲಯದ ಪೂಜಾರಿಗಳೇ ಎಂದು ಮೃತ ಮೈಲಾರಿ ಜಗಳವಾಡಿದ್ದ ಎಂದು ಮೃತನ ಕುಟುಂಬಸ್ಥರ ವಾದವಾಗಿದೆ. ಇದರ ಸಂಬಂಧ ಕೆಲ ರಾಜೀ ಪಂಚಾಯಿತಿ ಆಗಿ ಈ ಗಲಾಟೆ ತಣ್ಣಗಾಗಿತ್ತು. ಕೆಲ ದಿನಗಳ ಹಿಂದೆ ಮತ್ತೆ ಜಮೀನು ವಿಚಾರವಾಗಿ ಆರೋಪಿ ಮಲ್ಲ ಮೂರ್ತಪ್ಪ ಹಾಗು ಮೃತ ಮೈಲಾರ ನಡುವೆ ಗಲಾಟೆಯಾಗಿ ಮೈಲಾರಿ ಊರು ಬಿಟ್ಟು ದಾವಣಗೆರೆಯ ಗಾಂಧಿ ನಗರದಲ್ಲಿ ತಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದನಂತೆ. ಆದರೆ ಆರೋಪಿಗಳು ಹುಡುಕಿಕೊಂಡು ಬಂದು ಇದ್ದಕ್ಕಿದಂತೆ ಮೈಲಾರಿಯನ್ನು ನಡು ರಸ್ತೆಯಲ್ಲಿ ಕೊಲೆಗೈದಿದ್ದಾರೆ ಎಂದು ಕುಟುಂಬಸ್ಥರು ಅಳಲನ್ನು ತೋಡಿಕೊಂಡಿದ್ದಾರೆ.
ಮೈಲಾರಿಗಾಗಿ ಹುಡುಕಾಟ ನಡೆಸಿದ್ದ ಆರೋಪಿಗಳು.. ಇನ್ನು ಆರು ಎಕರೆ ಗೋಮಾಳ ಜಮೀನಿನಲ್ಲಿ ನಮ್ಮ ಪಾಲು ಇದೆ ಎಂದು ಆರೋಪಿ ಮಲ್ಲ ಮೂರ್ತಪ್ಪ ಹಾಗು ಮೃತ ಮೈಲಾರಿ ನಡುವೆ ಕಳೆದ ಕೆಲ ದಿನಗಳ ಹಿಂದೆ ಜಗಳ ಶುರುವಾಗಿತ್ತು. ಆರೋಪಿಗಳು ಹತ್ತಾರು ಸಲ ಮೈಲಾರಿಯನ್ನ ಹುಡುಕಾಡುತ್ತಿದ್ದರು. ಇಂದು ಗಾಂಧಿ ನಗರದಲ್ಲಿ ಮೈಲಾರಿ ಇರುವುದನ್ನು ಕಂಡು ಬರುತ್ತಿದ್ದಂತೆ ಚಾಕು ಹಾಕಿ ಕೊಲೆ ಮಾಡಿದ್ದಾರೆ. ಮಲ್ಲಾ ಮೂರ್ತಪ್ಪ ಹಾಗು ರಕ್ಷಿತ ಸೇರಿ ಏಳು ಜನ ಆರೋಪಿಗಳಿಂದ ಕೊಲೆಯಾಗಿದೆ ಎಂದು ಕೊಲೆಯಾದ ಮೈಲಾರಿ ಸಂಬಂಧಿಕರು ಆರೋಪಿಸುತ್ತಿದ್ದಾರೆ. ಈ ಸಂಬಂಧ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಪುತ್ತೂರು: ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಸಾವು