ದಾವಣಗೆರೆ: ಎಟಿಎಂ ಕೇಂದ್ರಕ್ಕೆ ಬರುವ ಸಾರ್ವಜನಿಕರಿಗೆ ಹಣ ತೆಗೆದುಕೊಡುವ ನಾಟಕವಾಡಿ ವಂಚಿಸುತ್ತಿದ್ದ ವ್ಯಕ್ತಿಯನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ಮೂಲದ ಯೋಗಾನಂದ ಬಂಧಿತ ಆರೋಪಿ.
ಇಂಗ್ಲಿಷ್ ಎಂಎ ವ್ಯಾಸಂಗ ಮಾಡಿ ಪಿಹೆಚ್ಡಿಯನ್ನೂ ಮುಗಿಸಿರುವ ಈತ ಎಟಿಎಂ ಮುಂದೆ ನಿಂತು ಹಳ್ಳಿ ಜನರು, ವಯಸ್ಸಾದವರನ್ನು ಗುರಿ ಮಾಡಿ ಎಟಿಎಂನಿಂದ ಹಣ ತೆಗೆದುಕೊಡುವ ನಾಟಕವಾಡುತ್ತಿದ್ದ. ಇದೇ ವೇಳೆ ತನ್ನ ಕುಚೋದ್ಯಕ್ಕೆ ಬೀಳುವ ಜನರ ಒರಿಜಿನಲ್ ಎಟಿಎಂ ಕಾರ್ಡ್ ಹಾಗು ಪಿನ್ ಪಡೆದು, ಬದಲಾಯಿಸಿ ಪರಾರಿಯಾಗುತ್ತಿದ್ದ.
ಕಳೆದ ಎರಡು ವರ್ಷಗಳಿಂದ ಕಳ್ಳತನ ಆರಂಭಿಸಿರುವ ಈತ ಇದುವರೆಗೂ 78 ಎಟಿಎಂ ಕಾರ್ಡ್ಗಳನ್ನು ಬದಲಾವಣೆ ಮಾಡಿ ಜನರಿಗೆ ಮೋಸ ಮಾಡಿದ್ದಾನೆ. ಅಕ್ರಮವಾಗಿ ಬದಲಾವಣೆ ಮಾಡಿದ ಎಟಿಎಂ ಕಾರ್ಡ್‌ಗಳಿಂದ ಒಟ್ಟು 8.58 ಲಕ್ಷ ಹಣ ಡ್ರಾ ಮಾಡಿದ್ದಾನೆ ಎಂದು ಎಸ್ಪಿ ಸಿಬಿ ರಿಷ್ಯಂತ್ ತಿಳಿಸಿದರು.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ? ದಾವಣಗೆರೆ ತಾಲೂಕಿನ ಮುಚ್ಚನೂರು ಗ್ರಾಮದ ಪಾಪಣ್ಣ ಎಂಬ ವೃದ್ದ ದಾವಣಗೆರೆ ನಗರಕ್ಕೆ ಬಂದಿದ್ದರು. ಈ ವೇಳೆ ಬಸವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಟಿಎಂಗೆ ಹೋಗಿ ಹಣ ಡ್ರಾ ಮಾಡುವಾಗ ಇದೇ ವ್ಯಕ್ತಿ ನಕಲಿ ಎಟಿಎಂ ಕೊಟ್ಟು ಅವರ ಅಕೌಂಟ್ನಿಂದ ಹಣ ಡ್ರಾ ಮಾಡಿದ್ದಾನೆ. ಈ ವಿಷಯ ಗೊತ್ತಾಗಿ ಪಾಪಣ್ಣ ಪೊಲೀಸರಿಗೆ ದೂರು ನೀಡಿದ್ದರು.
ಈ ಪ್ರಕರಣವನ್ನು ಪತ್ತೆ ಹಚ್ಚಲು ಎಸ್ಪಿ ರಿಷ್ಯಂತ್, ಡಿವೈಎಸ್ಪಿ ನರಸಿಂಹ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದರು. ವಂಚಕ ಯೋಗಾನಂದನ ಸಿಸಿಟಿವಿ ಫೂಟೇಜ್ ಪರಿಶೀಲಿಸಿ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು ಎರಡು ತಿಂಗಳ ನಂತರ ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೆ, 8.58 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ: ಪಡುವಾರಳ್ಳಿ ದೇವು ಕೊಲೆ ಪ್ರಕರಣ: 11 ಮಂದಿಗೆ ಜೀವಾವಧಿ ಶಿಕ್ಷೆ