ದಾವಣಗೆರೆ: ಒಂದೊಂದು ಮಹಾಮಾರಿ ಬಂದಾಗಲೆಲ್ಲಾ ಹಳ್ಳಿಯ ಜನರು ಒಂದೊಂದು ರೀತಿಯಲ್ಲಿ ಪೂಜೆ ಸಲ್ಲಿಸುತ್ತಾರೆ. ಅದೇ ರೀತಿಯಲ್ಲಿ ಕೊರೊನಾ ಸೋಂಕು ತೊಲಗಲಿ ಎಂದು ಪ್ರಾರ್ಥಿಸಿ ತಾಲೂಕಿನ ಲೋಕಿಕೆರೆ ಗ್ರಾಮದ ಜನರು ವಿಶೇಷ ಪೂಜೆ ಮಾಡಿದ್ದಾರೆ.
ಪ್ಲೇಗಮ್ಮ, ದಡಾರಮ್ಮ, ಮಲೇರಿಯಮ್ಮ ಹೀಗೆ ಜನರನ್ನು ಬೆಚ್ಚಿಬೀಳಿಸುವ ರೋಗ ಬಂದಾಗಲೆಲ್ಲಾ ಈ ರೀತಿಯ ಪೂಜೆ ಮಾಡುತ್ತಾರೆ. ಈಗ ಕೊರೊನಾ ಬಂದಿದ್ದು, ವಿಶ್ವಕ್ಕೆ ಭಯ ಹುಟ್ಟಿಸಿರುವ ಕೊರೊನಮ್ಮ ತೊಲಗಲಿ ಎಂದು ಪ್ರಾರ್ಥಿಸಿ ಆಂಜನೇಯ ಸ್ವಾಮಿ ಹಾಗೂ ಉಚ್ಚಂಗೆಮ್ಮ ದೇವಿಗೆ ಪೂಜೆ ನೆರವೇರಿಸಿದ್ದಾರೆ. ಈ ಮಾರಿ ತೊಲಗಿ ವಿಶ್ವಕ್ಕೆ ಶಾಂತಿ ಸಿಗಲಿ ಎಂದು ದೇವಿಗೆ ಬೇಡಿಕೊಂಡಿದ್ದಾರೆ. ಡೆಡ್ಲಿ ಸೋಂಕು ಊರಿಗೆ ಬಾರದಿರಲಿ ಎಂದು ಹೋಳಿಗೆ, ಅಮ್ಮನ ಕುಡಿಕೆ, ಕೆಂಪು ವಸ್ತ್ರ, ಕರಿ ಬಳೆ, ಕುಡಿಕೆಯಲ್ಲಿ ಬೇವಿನ ಸೊಪ್ಪು ಇಟ್ಟು ಊರಿನ ಹೊರ ಭಾಗದ ಕರಿಗಲ್ಲು ಹತ್ತಿರದ ಬೇವಿನ ಕಟ್ಟೆಯ ಮೇಲೆ ತಂದಿಟ್ಟಿದ್ದಾರೆ. ಒಂದು ಹಾಗೂ ಎರಡು ರೂಪಾಯಿ ದಕ್ಷಿಣೆ ಹಾಕಿ ತಿರುಗಿ ನೋಡದೇ ಅಲ್ಲಿಂದ ವಾಪಸ್ ಬರುತ್ತಾರೆ.
ಹೀಗೆ ಮಾಡಿದರೆ ಯಾವ ರೋಗವೂ ಗ್ರಾಮಕ್ಕೆ ವಕ್ಕರಿಸುವುದಿಲ್ಲ. ಬೇಡಿಕೊಂಡ ಹರಕೆ ಈಡೇರುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಹೀಗೆ ಬೇವಿನಕಟ್ಟೆಯಲ್ಲಿಟ್ಟಿದ್ದ ಎಲ್ಲಾ ನೇವೇದ್ಯವನ್ನು ಊರಿನಲ್ಲಿನ ಹಳ್ಳಕ್ಕೆ ಅರ್ಪಿಸಲಾಗಿದೆ. ಮಾರಕ ರೋಗಗಳು ಬರದಿರಲಿ ಎಂದು ಈ ರೀತಿಯ ಪೂಜೆ ಮಾಡುವ ಸಂಪ್ರದಾಯ ಗ್ರಾಮೀಣ ಭಾಗದಲ್ಲಿದೆ.