ದಾವಣಗೆರೆ: ಆ ರಸ್ತೆ ದಾವಣಗೆರೆ ನಗರಕ್ಕೂ ಕುಂದವಾಡ ಗ್ರಾಮಕ್ಕೂ (ಪಾಲಿಕೆಗೆ ಸೇರಿದೆ) ಸಂಪರ್ಕ ಸೇತುವೆಯಾಗಿತ್ತು. ಆದರೆ, ಇಲ್ಲೊಬ್ಬ ವ್ಯಕ್ತಿ ರಸ್ತೆ ಪಕ್ಕದಲ್ಲಿದ್ದ ನಿವೇಶನದೊಂದಿಗೆ ಇಡೀ ರಸ್ತೆಯೇ ನನಗೆ ಸೇರಿದ್ದೆಂದು ಬೇಲಿ ಹಾಕಿದ್ದಾನೆ. ಇದರಿಂದ ಸಾರ್ವಜನಿಕರು ರಸ್ತೆ ಇಲ್ಲದೆ ಪರದಾಡುವಂತಾಗಿದೆ.
ದಾವಣಗೆರೆ ನಗರದಿಂದ ಹಳೆ ಕುಂದುವಾಡಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಗೆ ವ್ಯಕ್ತಿಯೋರ್ವ ಈ ರಸ್ತೆ ನನ್ನ ನಿವೇಶನಕ್ಕೆ ಸೇರಿದ್ದು ಎಂದು ರಾತ್ರಿ ಬೇಲಿ ಹಾಕಿದ್ದಾನೆ. ನಮಗೆ ಸಂಚರಿಸಲು ತೊಂದರೆಯಾಗ್ತಿದೆ ಸ್ವಾಮಿ ಬೇಲಿ ತೆಗೆದುಬಿಡಿ ಎಂದು ಮಾಲೀಕನ ಬಳಿ ಜನ ಮನವಿ ಮಾಡಿದ್ರೂ ಯಾವುದಕ್ಕೂ ಜಗ್ಗದ ನಿವೇಶನದ ಮಾಲೀಕ ಶಿವುಕುಮಾರ್, ಬೇಲಿ ತೆಗೆಯದೆ ಉದ್ಧಟತನ ಮೆರೆದಿದ್ದಾರೆ. ನಾನು ಬೇಲಿ ಹಾಕಿರುವ ನಿವೇಶನ ನನಗೆ ಸೇರಿದ್ದು ಎಂದು ಪಾಲಿಕೆಯಿಂದ ನೀಡಿದ ದಾಖಲೆ ಪ್ರದರ್ಶಿಸಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.
ಇದರಿಂದಾಗಿ ಜನರು ರಸ್ತೆ ದಾಟಲು ಪರದಾಟ ಅನುಭವಿಸುತ್ತಿದ್ದರು. ಪರಿಸ್ಥಿತಿ ನೋಡಿ ಸಾಕಾಗಿ ಜನರು ತಾಳ್ಮೆ ಕಳೆದುಕೊಂಡು ಬೆಳಗ್ಗೆ ಆಗಮಿಸಿ ಕಲ್ಲಿನ ಕಂಬ, ತಂತಿ ಬೇಲಿ ಕಿತ್ತೊಗೆದು ರೋಷಾವೇಷ ಪ್ರದರ್ಶಿಸಿದ್ರು. ಇದಲ್ಲದೆ ಪಾಲಿಕೆಗೆ ಆಗಮಿಸಿದ ಹಳೇಕುಂದವಾಡದ ಜನ್ರು ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆ ಜಾಗ ಒತ್ತುವರಿ ಮಾಡಲಾಗಿದೆ, ಕ್ರಮ ಕೈಗೊಳ್ಳುತ್ತೇವೆ ಎಂದು ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ತಿಳಿಸಿದ್ದಾರೆ.
ಇದನ್ನೂ ಓದಿ: ಕಾರ್ಮಿಕರ ಮಕ್ಕಳಿಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ, 25 ಸಾವಿರ ರೂ. ಧನಸಹಾಯ : ಸಚಿವ ಹೆಬ್ಬಾರ್