ದಾವಣಗೆರೆ: ರಸ್ತೆಯಲ್ಲಿ ಸಂಚರಿಸುತ್ತಿದ್ದವರ ಮೇಲೆ ಚಿರತೆ ದಾಳಿ ಮಾಡಿದ್ದು, ಸಣ್ಣಪುಟ್ಟ ಗಾಯಗಳಿಂದ ಇಬ್ಬರು ಪಾರಾಗಿರುವ ಘಟನೆ ಜಿಲ್ಲೆಯ ನ್ಯಾಮತಿಯಲ್ಲಿ ಕಳೆದ ದಿನ ರಾತ್ರಿ ನಡೆದಿದೆ. ಜಿಲ್ಲೆಯ ನ್ಯಾಮತಿ ತಾಲೂಕಿನಲ್ಲಿ ಚಿರತೆ ದಾಳಿ ಮಿತಿಮೀರಿದೆ. ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ದಾಳಿ ಮಾಡುತ್ತಿದ್ದ ಚಿರತೆಗಳು ಇದೀಗ ರಸ್ತೆಯಲ್ಲಿ ಸಂಚರಿಸುತ್ತಿದ್ದವರ ಮೇಲೂ ಎರಗುತ್ತಿವೆ. ಚಿರತೆಯ ದಾಳಿಯಿಂದ ನ್ಯಾಮತಿ ತಾಲೂಕಿನ ಜನರು ಜೀವ ಅಂಗೈಯಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ನ್ಯಾಮತಿ ತಾಲೂಕಿನ ಹಳೇಮಳಲಿ ಗ್ರಾಮದ ಮಂಜುನಾಥ್, ಹೊಸಮಳಲಿ ಗ್ರಾಮದ ಮಲ್ಲಿಕಾರ್ಜುನ್ ಚಿರತೆ ದಾಳಿಗೊಳಗಾದವರು. ಚಿರತೆ ದಾಳಿಗೊಳಗಾದ ಇಬ್ಬರು ಕೂಡ ನ್ಯಾಮತಿಯಿಂದ ತಮ್ಮ ಗ್ರಾಮಗಳಿಗೆ ತೆರಳುವ ರಸ್ತೆಯಲ್ಲಿ ಹೋಗುತ್ತಿದ್ದಾಗ ಏಕಾಏಕಿ ಚಿರತೆ ದಾಳಿ ಮಾಡಿದೆ. ದಾಳಿ ಪರಿಣಾಮ ಇಬ್ಬರ ಕೈ-ಕಾಲಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ನ್ಯಾಮತಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ಮಾಜಿ ಶಾಸಕ ಎಂಪಿ ರೇಣುಕಾಚಾರ್ಯರ ಭೇಟಿ: ದಾಳಿಯ ವಿಚಾರ ತಿಳಿದು ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಘಟನೆಯಿಂದ ಭಯಭೀತರಾಗಿರುವ ಗ್ರಾಮದ ಜನರು ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ. ಅಲ್ಲದೆ ಬೋನ್ ಅಳವಡಿಸಿ ಚಿರತೆಗಳನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದರು. ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಚಿರತೆ ದಾಳಿಯಿಂದ ಶ್ವಾನ ಪಾರು: ನಾಯಿ ಮೇಲೆ ಚಿರತೆ ದಾಳಿ ನಡೆಸಿದ್ದು, ಶ್ವಾನವು ಹರಸಾಹಸಪಟ್ಟು ತಪ್ಪಿಸಿಕೊಂಡು ಓಡಿದ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಜಿ ಟಿ ಕಟ್ಟೆ ತೋಟದ ಮನೆಯಲ್ಲಿ ಘಟನೆ ಇತ್ತೀಚೆಗೆ ನಡೆದಿತ್ತು. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕೆಲವು ದಿನಗಳಿಂದ ಜಿ ಟಿ ಕಟ್ಟೆ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ರಾತ್ರಿ ವೇಳೆ ನಾಯಿ ಮೇಲೆ ದಾಳಿ ನಡೆಸಿದೆ. ಚಿರತೆ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದ್ದು, ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ: ವಿಜಯನಗರ: ಬೈಕ್ ಸವಾರನ ಮೇಲೆ ಚಿರತೆ ದಾಳಿ, ಯುವಕನಿಗೆ ಗಾಯ