ದಾವಣಗೆರೆ : ಡ್ರ್ಯಾಗನ್ ಫ್ರೂಟ್ ಒಂದು ವಿಶೇಷ ತಳಿಯ ಹಣ್ಣು. ಈ ಹಣ್ಣು ಸೇವಿಸಿದರೆ ಐಸ್ ಕ್ರೀಂ ಸವಿದ ಅನುಭವವಾಗುತ್ತದೆ. ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಈ ಹಣ್ಣನ್ನು ಜಿಲ್ಲೆಯ ರೈತರೋರ್ವರು ಬೆಳೆದಿದ್ದು, ವರ್ಷಕ್ಕೆ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದಾರೆ.
ದಾವಣಗೆರೆ ತಾಲೂಕಿನ ಸಿದ್ದನೂರು ಗ್ರಾಮದ ರೈತ ಮಂಜಣ್ಣ ಡ್ರ್ಯಾಗನ್ ಫ್ರೂಟ್ ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಹತ್ತನೇ ತರಗತಿ ಓದಿರುವ ಮಂಜಣ್ಣ, ಎಕರೆಗೆ ನಾಲ್ಕು ಲಕ್ಷ ಬಂಡವಾಳ ಹಾಕಿ, ಐದು ವರ್ಷದಲ್ಲಿ 25 ಲಕ್ಷ ರೂಪಾಯಿ ಲಾಭ ಪಡೆದಿದ್ದಾರೆ.
ಇನ್ನು, ತನ್ನ ಒಂದು ಎಕರೆ ಜಮೀನಿನಲ್ಲಿ ಏನು ಬೆಳೆಯಬಹುದು ಎಂದು ಯೋಚಿಸುತ್ತಿದ್ದ ರೈತ ಮಂಜಣ್ಣನಿಗೆ ಡ್ರ್ಯಾಗನ್ ಫ್ರೂಟ್ ಬೆಳೆಯುವ ಬಗ್ಗೆ ಆಸಕ್ತಿ ಮೂಡಿದೆ. ಹೀಗೆ ಒಂದು ಎಕರೆಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದರು. ಈ ಡ್ರ್ಯಾಗನ್ ಫ್ರೂಟ್ ಗಿಡಗಳನ್ನು ನೆಟ್ಟಗೆ ನಿಲ್ಲಿಸಲು ಕಲ್ಲಿನ ಅಳವಡಿಸಲಾಗಿದ್ದು, ಇದಕ್ಕೆ ಡ್ರಿಪ್ ಮೂಲಕ ನೀರಿನ ವ್ಯವಸ್ಥೆ ಮಾಡಿದ್ದಾರೆ. ಒಂದು ಗಿಡಕ್ಕೆ ಸುಮಾರು 600 ರೂ. ವೆಚ್ಚ ತಗುಲಿದ್ದು, ಎಕರೆಯಲ್ಲಿ 400 ಗಿಡಗಳಿಗೂ ಹೆಚ್ಚು ಗಿಡಗಳನ್ನು ನೆಡಬಹುದಾಗಿದೆ. ಇನ್ನು, ಈ ಗಿಡಗಳಿಂದ ಸಿಗುವ ಫಸಲನ್ನು ರೈತ ಮಂಜಣ್ಣ ಹುಬ್ಬಳ್ಳಿ, ಮುಂಬೈ, ಬೆಂಗಳೂರು, ದಾವಣಗೆರೆ ಹೀಗೆ ದೇಶದ ವಿವಿಧ ಭಾಗಗಳಿಗೆ ಮಾರಾಟ ಮಾಡುತ್ತಾರೆ.
ಈ ಡ್ರ್ಯಾಗನ್ ಫ್ರೂಟ್ ಗಿಡವು ಕ್ಯಾಕ್ಟಸ್ ತಳಿಗೆ ಸೇರಿದ ಗಿಡವಾಗಿರುವುದ್ದರಿಂದ ಒಮ್ಮೆ ಗಿಡ ನೆಟ್ಟರೆ ಸಾಯುವುದಿಲ್ಲ. ಈ ಗಿಡ ನೆಡುವಾಗ ಮಾತ್ರ ರೈತನಿಗೆ ಹೆಚ್ಚು ಹೊರೆಯಾಗಲಿದ್ದು, ಬಳಿಕ ಕೈ ತುಂಬಾ ಆದಾಯ ಗಳಿಸಬಹುದಾಗಿದೆ. ಇನ್ನು ಗಿಡಗಳ ಪಾಲನೆಗೆ ಪ್ರತಿ ವರ್ಷ ಎಕರೆಗೆ ಹೆಚ್ಚೆಂದರೆ 15 ಸಾವಿರ ರೂಪಾಯಿ ವೆಚ್ಚವಾಗಬಹುದು, ಬಳಿಕ ನಿರಂತರವಾಗಿ 20 ವರ್ಷ ಈ ಹಣ್ಣಿನಿಂದ ಆದಾಯ ಬರುತ್ತದೆ ಎಂದು ಹೇಳುತ್ತಾರೆ.
ಕಡಿಮೆ ತೇವಾಂಶದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದ ರೈತ : ಈ ಡ್ರ್ಯಾಗನ್ ಫ್ರೂಟ್ ಬೆಳೆಯಲು ಅಧಿಕ ತೇವಾಂಶ ಹಾಗು ನೀರು ಹೆಚ್ಚಿರುವ ಜಮೀನು ಬೇಕಾಗುತ್ತದೆ. ಆದರೆ ಮಂಜಣ್ಣ ಮಾತ್ರ ಕಡಿಮೆ ತೇವಾಂಶ ಇರುವ ತನ್ನ ಒಂದು ಎಕರೆ ಜಮೀನಿನಲ್ಲಿ ಬೆಳೆ ಬೆಳೆದಿದ್ದಾರೆ. ಒಣ ಭೂಮಿಯಲ್ಲಿ ತೇವಾಂಶ ಕಡಿಮೆ ಇದ್ದರೂ ಡ್ರ್ಯಾಗನ್ ಫ್ರೂಟ್ಸ್ ಬೆಳೆದು ಹೆಚ್ಚು ಆದಾಯ ಪಡೆಯಬಹುದಾಗಿದೆ. ಹೆಚ್ಚು ಶೀತವಿದ್ದರೆ ಇಳುವರಿ ಕಡಿಮೆ ಬರುವ ಸಾಧ್ಯತೆ ಇದ್ದು, ಕಡಿಮೆ ತೇವಾಂಶ ಇರುವ ಒಣ ಭೂಮಿ ಈ ಬೆಳೆಗೆ ಸೂಕ್ತವಾಗಿದೆ.
ಮಹಾರಾಷ್ಟ್ರ, ವಿಜಯಪುರದಲ್ಲಿ ಹೆಚ್ಚು ಬೆಳೆಯುವ ಹಣ್ಣು : ಸಾಮಾನ್ಯವಾಗಿ ಈ ಹಣ್ಣನ್ನು ಮಹಾರಾಷ್ಟ್ರ ಹಾಗು ವಿಜಯಪುರ ಭಾಗದಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಡ್ರ್ಯಾಗನ್ ಫ್ರೂಟ್ ವಾರ್ಷಿಕ ಬೆಳೆಯಾಗಿದೆ. ಪ್ರತಿ ಗಿಡದಲ್ಲಿ 25 ರಿಂದ 30 ಕೆಜಿ ಹಣ್ಣು ದೊರೆಯುತ್ತಿದ್ದು, ಪ್ರತೀ ಹಣ್ಣು 400 ರಿಂದ 500 ಗ್ರಾಂ ತೂಗುತ್ತದೆ. ಪ್ರತಿಯೊಂದು ಕೆಜಿಗೆ ಇನ್ನೂರು ರೂಪಾಯಿ ದೊರೆಯುತ್ತಿದ್ದು, ವರ್ಷಕ್ಕೆ 5 ರಿಂದ 6 ಲಕ್ಷ ಗಳಿಸಬಹುದು ಎಂದು ರೈತ ಮಂಜಣ್ಣ ಹೇಳುತ್ತಾರೆ.
ಇದನ್ನೂ ಓದಿ : ಸಾಹಸಗಾಥೆ..12 ಗುಂಟೆ ಜಮೀನಿನಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಲಕ್ಷಾಂತರ ರೂ. ಆದಾಯ ಗಳಿಸಿದ ರೈತ