ದಾವಣಗೆರೆ: ಮನೆಯಲ್ಲಿ ಆಟವಾಡುತ್ತಿದ್ದ 12 ವರ್ಷ ಬಾಲಕನ ಮೇಲೆ ಬಿಸಿ ಸಾಂಬಾರ್ ಬಿದ್ದು ಗಾಯಗೊಂಡಿದ್ದ ಬಾಲಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಯಲೋದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಮರ್ಥ್ (12) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಬಾಲಕನಾಗಿದ್ದು, ಯಲೋದಹಳ್ಳಿ ಗ್ರಾಮದ ಶೃತಿ ಹನುಮಂತ ದಂಪತಿಯ ಎರಡನೇ ಮಗ. ಸಮರ್ಥ್ ಕಳೆದ ಎರಡು ದಿನಗಳ ಹಿಂದೆ ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಆತನ ಮೇಲೆ ಬಿಸಿ ಸಾಂಬಾರ್ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಕೂಡಲೇ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆ ತಂದಿದ್ದರು.
ಆದರೆ, ಸುಟ್ಟ ಗಾಯ ಮಾಯದೇ ಬಾಲಕ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆ, ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಮರ್ಥ್ ಸಾವನ್ನಪ್ಪಿದ್ದು, ಮೃತದೇಹವನ್ನು ಸ್ವ ಗ್ರಾಮಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ಮಾಡಲಾಯಿತು. ಬಾಲಕನ ಅಂತ್ಯ ಸಂಸ್ಕಾರದ ವೇಳೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಸಮರ್ಥ್ ಯಲೋದಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ. ಮೈ ಮೇಲೆ ಸಾರು ಬೀಳಿಸಿಕೊಂಡು ಗಾಯಗೊಂಡಿದ್ದರೂ ಆರಾಮಾಗಿಯೇ ಇದ್ದ. ಅಷ್ಟೇ ಅಲ್ಲ ಗೆಳೆಯರೊಂದಿಗೆ ಆಟವಾಡುವುದು, ಶಾಲೆಗೆ ಹೋಗಿ ಬರುತ್ತಿದ್ದ. ಆದರೆ, ಗುರುವಾರ ತುಂಬಾ ನೋವು ಕಾಣಸಿಕೊಂಡ ಕಾರಣ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆಗೆ ದಾಖಲು ಮಾಡಿದ್ದೆವು. ಆದರೆ, ಮಗನನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬಾಲಕನ ತಂದೆ ಹನುಮಂತಪ್ಪ ತಮ್ಮ ಅಳಲು ತೋಡಿಕೊಂಡರು.
ಇದನ್ನೂ ಓದಿ: ಟಾರ್ ತುಂಬಿದ ಟ್ಯಾಂಕರ್ಗೆ ಬಸ್ ಡಿಕ್ಕಿ: 7 ಮಂದಿಗೆ ಸುಟ್ಟ ಗಾಯ.. ಇಬ್ಬರ ಸ್ಥಿತಿ ಗಂಭೀರ
ರಾಜ್ಯದ ಇತರ ಘಟನೆಗಳು:- ಕೋಲಾರದಲ್ಲಿ ಬ್ಯಾರಿಕೇಡ್ಗೆ ಬೈಕ್ ಡಿಕ್ಕಿ- ಪೊಲೀಸ್ ಕಾನ್ಸ್‌ಟೇಬಲ್ ಸಾವು: ಇನ್ನೊಂದೆಡೆ, ಬ್ಯಾರಿಕೇಡ್ಗೆ ಬೈಕ್ ಡಿಕ್ಕಿ ಹೊಡೆದು ಬೈಕ್ನಲ್ಲಿದ್ದ ಕಾನ್ಸ್‌ಟೇಬಲ್ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಮೂರು ದಿನದ ಹಿಂದೆ ಕೆಜಿಎಫ್ ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ 37 ವರ್ಷದ ಚಿರಂಜೀವಿ ತಾಲೂಕಿನ ಮಾರಿಕುಪ್ಪಂ ಬಳಿ ಬ್ಯಾರಿಕೇಡ್ಗೆ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿದ್ದರು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬಂಗಾರಪೇಟೆ ತಾಲೂಕಿನ ದೋಣಿಮಡಗು ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿದೆ. ಪೊಲೀಸ್ ಸಿಬ್ಬಂದಿಯಿಂದ ಸಹೋದ್ಯೋಗಿಗಳು ಅಂತಿಮ ದರ್ಶನ ಪಡೆದು ವಿದಾಯ ಹೇಳಿದರು. ಈ ಘಟನೆ ಅಂಡರ್‌ಸನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಜಯಪುರದಲ್ಲಿ2 ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿ-ಓರ್ವ ಸಾವು: 2 ದ್ವಿಚಕ್ರ ವಾಹನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ದುರ್ಘಟನೆ ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಎರಡೂ ದ್ವಿಚಕ್ರವಾಹನದಲ್ಲಿದ್ದವರು ಮನಗೂಳಿ ಪಟ್ಟಣದವರು ಎಂದು ಹೇಳಲಾಗಿದೆ. ಈ ಕುರಿತು ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.