ದಾವಣಗೆರೆ: ಕೊರೊನಾ ಹಿನ್ನೆಲೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಂಡು ದಾವಣಗೆರೆ ವಿವಿಯ 7ನೇ ಘಟಿಕೋತ್ಸವವನ್ನು ಸರಳವಾಗಿ ನಡೆಸಲಾಯಿತು.
ಘಟಿಕೋತ್ಸವದಲ್ಲಿ 56 ಜನರಿಗೆ ಪಿಹೆಚ್‍ಡಿ ಪ್ರದಾನ ಮಾಡಲಾಯಿತು. 62 ಚಿನ್ನದ ಪದಕ ನೀಡಲಾಯಿತು. 8441 ವಿದ್ಯಾರ್ಥಿಗಳು ಸ್ನಾತಕ ಪದವಿ ಹಾಗೂ 1592 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದರು.
ಗೌರವ ಡಾಕ್ಟರೇಟ್:
ಈ ಬಾರಿ ದಾವಣಗೆರೆ ವಿಶ್ವವಿದ್ಯಾನಿಲಯ ವತಿಯಿಂದ ಒಬ್ಬರಿಗೆ ಮಾತ್ರ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದ್ದು, ಕಲಬುರ್ಗಿಯ ಶರಣಬಸವೇಶ್ವರ ಅಪ್ಪ ಶೈಕ್ಷಣಿಕ ಸಂಸ್ಥೆಗಳ ಅಧ್ಯಕ್ಷರಾಗಿರುವ ಮಾತೋಶ್ರೀ ದಾಕ್ಷಾಯಿಣಿ ಅಪ್ಪ ಅವರಿಗೆ ಈ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. 30 ವರ್ಷದ ಸಾಮಾಜಿಕ ಸೇವೆ ಪರಿಗಣಿಸಿ ಈ ಗೌರವ ನೀಡಲಾಗಿದೆ.
ವರ್ಚುವಲ್ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯ ಅತಿಥಿಗಳಾಗಿ ಘಟಿಕೋತ್ಸವದ ಮುಖ್ಯ ಭಾಷಣ ಮಾಡಿದ ವಿಕ್ರಮ್ ಸಾರಾಭಾಯಿ ಪ್ರೊಫೆಸರ್ ಹಾಗೂ ಇಸ್ರೋದ ಮಾಜಿ ಅಧ್ಯಕ್ಷ ಡಾ. ಎ.ಎಸ್. ಕಿರಣ್ ಕುಮಾರ್, ವಿದ್ಯಾರ್ಥಿಗಳ ಕಲಿಕೆ ಕೇವಲ ಕಾಲೇಜು ಶಿಕ್ಷಣಕ್ಕೆ ಸೀಮಿತವಾಗಬಾರದು. ಕಲಿಕೆ ಎಂದಿಗೂ ಅಂತ್ಯವಾಗಿರುವುದಿಲ್ಲ. ಬದಲಾಗಿ ಅದೊಂದು ನಿರಂತರ ಪ್ರಕ್ರಿಯೆ. ಸ್ಪರ್ಧಾತ್ಮಕ ಹಾಗೂ ವೇಗವಾಗಿ ಬದಲಾಗುವ ಪರಿಸ್ಥಿತಿಯಲ್ಲಿ ಮುನ್ನಡೆ ಸಾಧಿಸಲು ಸಹಕರಿಸುತ್ತದೆ ಎಂದು ಹೇಳಿದರು.
ಭಾರತದ ಬಾಹ್ಯಾಕಾಶ ಯೋಜನೆ ಆರಂಭದ ದಿನದಿಂದಲೂ ಉಪಗ್ರಹ ಸಂವಹನ, ಪ್ರಸಾರ, ಭೂ ಸರ್ವೇಕ್ಷಣೆ, ಬಾಹ್ಯಾಕಾಶ ವಿಜ್ಞಾನ ಅಧ್ಯಯನ, ಬಾಹ್ಯಾಕಾಶ ಸಾರಿಗೆ ವ್ಯವಸ್ಥೆಗಳು ಹಾಗೂ ಸಂಬಂಧಿತ ಯೋಜನೆಗಳು ವಿಶಿಷ್ಟತೆಗಳನ್ನು ರೂಢಿಸಿಕೊಂಡಿದೆ. ಭಾರತವು ಬಾಹ್ಯಾಕಾಶ ತಂತ್ರಜ್ಞಾನವನ್ನು ವಿಕೋಪ ನಿರ್ವಹಣೆ, ಬೆಸ್ತರಿಗೆ ನೆರವು ನೀಡುವಂತಹ ಜನ ಸಾಮಾನ್ಯರಿಗೆ ಉಪಯುಕ್ತ ಕ್ರಮಗಳಿಗೆ ಬಳಸುತ್ತಾ ಬಂದಿದೆ ಎಂದು ತಿಳಿಸಿದರು.
2018-19 ನೇ ಸಾಲಿನಲ್ಲಿ ಸ್ನಾತಕ ಪದವಿಯಲ್ಲಿ ಶೇ. 56.55 ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇ. 82.87 ರಷ್ಟು ಫಲಿತಾಂಶ ಬಂದಿದೆ ಎಂದು ವಿವಿಯ ಕುಲಪತಿ ಡಾ. ಎಸ್. ವಿ. ಹಲಸೆ ತಿಳಿಸಿದರು.