ದಾವಣಗೆರೆ: ಪರಿಶಿಷ್ಟ ಪಂಗಡಕ್ಕೆ ಶೇಕಡಾ 7.5 ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಬೆಂಗಳೂರು ಚಲೋ ಪಾದಯಾತ್ರೆ ಹಮ್ಮಿಕೊಂಡ ಬೆನ್ನಲ್ಲೇ ಸರ್ಕಾರ ಮೀಸಲಾತಿ ಮಾರ್ಪಡಿಸುತ್ತೇವೆ ಎಂದು ಒಂದು ತಿಂಗಳು ಟೈಮ್ ಕೇಳಿತ್ತು. ಆದರೆ, ಒಂದು ತಿಂಗಳು ಕಳೆಯುತ್ತಾ ಬಂದರೂ ಸರ್ಕಾರ ಈ ಬಗ್ಗೆ ತಲೆಕೆಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮತ್ತೆ ಪ್ರತಿಭಟನೆ ನಡೆಸಲು ವಾಲ್ಮೀಕಿ ಶ್ರೀ ರೂಪರೇಷೆ ಸಿದ್ಧಪಡಿಸುತ್ತಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಿಂದ ಬೆಂಗಳೂರಿನವರಿಗೆ ವಾಲ್ಮೀಕಿ ಶ್ರೀ ಪ್ರಸನ್ನಾನಂದಪುರಿ ಶ್ರೀಗಳು ಪಾದಯಾತ್ರೆ ನಡೆಸಿದ್ದರು. ಪರಿಶಿಷ್ಟ ಪಂಗಡಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇಕಡಾ 7.5 ರಷ್ಟು ಮೀಸಲಾತಿ ಕಲ್ಪಿಸುವುದು ಮತ್ತು ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ನೀಡುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹಿಸಿ ಪಾದಯಾತ್ರೆ ನಡೆಸಲಾಗಿತ್ತು. ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಈ ಹಿನ್ನೆಲೆ ಸರ್ಕಾರ ಬೇಡಿಕೆಗೆ ಒಪ್ಪಿ ಒಂದು ತಿಂಗಳು ಕಾಲಾವಕಾಶ ಕೇಳಿತ್ತು. ಆದರೆ, ಒಂದು ತಿಂಗಳು ಕಳೆಯುತ್ತಾ ಬಂದರೂ, ಸರ್ಕಾರ ಈ ಬಗ್ಗೆ ಗಮನಹರಿಸಿಲ್ಲ. ಹೀಗಾಗಿ ದಾವಣಗೆರೆ ತಾಲೂಕಿನ ರಾಜನಹಳ್ಳಿ ಗ್ರಾಮದ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಳ ಕುರಿತ ಜಿಲ್ಲಾ ಮಟ್ಟದ ಸಭೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಎಸ್‍ಸಿ ಮತ್ತು ಎಸ್‍ಟಿಗೆ ಪ್ರತ್ಯೇಕ ಸಚಿವಾಲಯ, ಮಂತ್ರಿ ಮಂಡಲದಲ್ಲಿ ಪರಿಶಿಷ್ಟ ಪಂಗಡಕ್ಕೆ 3 ಸ್ಥಾನ ಮೀಸಲಿಡಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ನೀಡುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ವಾಲ್ಮೀಕಿ ಶ್ರೀಗಳು ಆಗ್ರಹಿಸಿದ್ದಾರೆ.
ನಿವೃತ್ತ ಜಿಲ್ಲಾಧಿಕಾರಿ ಬಿ. ಶಿವಪ್ಪ ಮಾತನಾಡಿ, ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸುವ ವಿಷಯಕ್ಕೆ ಸಂಬಂಧಿಸಿದಂತೆ ಆಯೋಗ ರಚಿಸಿ ಕಾಲಹರಣ ಮಾಡುವ ಷಡ್ಯಂತ್ರ ಮಾಡಿದೆ. ಈ ಮೂಲಕ ಸಮಾಜದ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಆಯೋಗ ರಚನೆಗೆ ಅನುಮತಿ ನೀಡಿದ್ದರೂ ಆಯೋಗದ ಕಾರ್ಯವೈಖರಿ ಬಗ್ಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿಲ್ಲ. ಜನಸಂಖ್ಯೆ, ಸಮಾಜದ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಮಾಡಿ, ಕಾಲಹರಣ ಮಾಡದೆ. ಇತ್ತೀಚೆಗೆ ನಡೆಸಿದ ಜಾತಿ ಗಣತಿ ಆಧಾರದ ಮೇಲೆ ಮೀಸಲಾತಿ ಬಗ್ಗೆ ನಿರ್ಣಯ ಕೈಗೊಂಡು ವಾಲ್ಮೀಕಿ ಸಮಾಜಕ್ಕೆ 7.5 ಮೀಸಲಾತಿ ನೀಡಬೇಕು ಎಂಬುದು ವಾಲ್ಮೀಕಿ ಸಮಾಜದ ಒತ್ತಾಯವಾಗಿದೆ.