ದಾವಣಗೆರೆ: ಚುನಾವಣೆ ಹೊತ್ತಲ್ಲೇ ದಾಖಲೆ ಇಲ್ಲದೆ ಸಾಗಿಸುವ ಹಣ, ಒಡವೆ ಇನ್ನಿತರ ವಸ್ತುಗಳ ಮೇಲೆ ಚುನಾವಣ ಆಯೋಗ ಕಣ್ಣಿಟ್ಟಿದೆ. ಜಿಲ್ಲೆಯಾದಂತ್ಯ ದಾಖಲೆ ಇಲ್ಲದ ಹಣ, ಮದ್ಯ ಸಾಗಣೆಗೆ ಕಡಿವಾಣ ಹಾಕಲು ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ದಾವಣಗೆರೆ ತಾಲೂಕಿನ ಹೆಬ್ಬಾಳ ಟೋಲ್ನ ಚೆಕ್ ಪೋಸ್ಟ್ ಬಳಿ ದಾಖಲೆ ಇಲ್ಲದ ಒಟ್ಟು 66 ಕೆಜಿಯ 39 ಲಕ್ಷ ಮೌಲ್ಯದ ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಹಶೀಲ್ದಾರ್ ಡಾ.ಅಶ್ವತ್ಥ ಟೋಲ್ ಮಾಹಿತಿ ನೀಡಿದರು.
ಟೋಲ್ಗೆ ಬಂದ ವೇಳೆ ಬಿಎಮ್ಡಬ್ಲ್ಯೂ ಕಾರನ್ನು ತಡೆದ ಚುನಾವಣಾ ಅಧಿಕಾರಿ ಡಾ ಅಶ್ವತ್ ನೇತೃತ್ವದ ತಂಡ ತಪಾಸಣೆ ನಡೆಸಿತ್ತು. ಈ ವೇಳೆ, ಅಪಾರ ಪ್ರಮಾಣದ ಬೆಳ್ಳಿ ಪತ್ತೆಯಾಗಿದೆ. ಅಲ್ಲದೇ ಇದಕ್ಕೆ ಯಾವುದೇ ದಾಖಲೆ ಇಲ್ಲದ ಕಾರಣ ಬೆಳ್ಳಿ ಮತ್ತು ಬಿಎಮ್ಡಬ್ಲ್ಯೂ ಕಾರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇನ್ನು ದಾವಣಗೆರೆ ತಾಲೂಕಿನ ಹೆಬ್ಬಾಳ ಟೋಲ್ ಚೆಕ್ಪೋಸ್ಟ್ನಲ್ಲಿ ಪತ್ತೆಯಾದ ದಾಖಲೆ ಇಲ್ಲದ ಬೆಳ್ಳಿ ಸಾಮಾನುಗಳನ್ನು ವಶ ಪಡಿಸಿಕೊಂಡು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.
'ಕಾರಲ್ಲಿರುವ ಬೆಳ್ಳಿ ಸಾಮಾನುಗಳು ಬಾಲಿವುಡ್ ನಿರ್ಮಾಪಕರೊಬ್ಬರಿಗೆ ಸೇರಿದ್ದು ಎಂದು ಕಾರು ಚಾಲಕ ಹೇಳಿದ್ದಾನೆ. ಆದ್ರೆ ನಿರ್ಮಾಪಕರದ್ದೇ ಎನ್ನುವುದಕ್ಕೆ ದಾಖಲೆಗಳನ್ನು ನೀಡಿಲ್ಲ. ತನಿಖೆಯ ನಂತರವೇ ಸತ್ಯ ಗೊತ್ತಾಗಲಿದೆ. ದಾಖಲೆಗಳಿಲ್ಲದ ಹಿನ್ನೆಲೆ ಕಾರು ಮತ್ತು ಬೆಳ್ಳಿ ಸಾಮಾನುಗಳನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದೇವೆ' ಎಂದು ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.
ಚಾಲಕ ಸೇರಿ ಇಬ್ಬರು ಕಾರಲ್ಲಿ ಚೆನ್ನೈನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಸೊಂಟಕ್ಕೆ ನೋಟು ಕಟ್ಟಿಕೊಂಡು ಸಾಗಣೆ: ಇಬ್ಬರನ್ನ ವಶಕ್ಕೆ ಪಡೆದ ಪೊಲೀಸರು
ಅಡುಗೆ ಸಲಕರಣೆಗಳ ವಶ: ಈ ಹಿಂದೆ ಇಲ್ಲಿಯ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸೂಕ್ತ ದಾಖಲೆ ಇಲ್ಲದ 7.19 ಲಕ್ಷ ರೂಪಾಯಿ ಮೌಲ್ಯದ ಅಡುಗೆ ಸಲಕರಣೆಗಳನ್ನು ವಶಕ್ಕೆ ಪಡೆಯಲಾಗಿತ್ತು. ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ದೊರೆತಂತಹ ಅಡುಗೆ ಸಲಕರಣೆಗಳು ಶಾಸಕ ಹಾಗೂ ಮತ್ತವರ ಪುತ್ರ ಹಾಗೂ ಮಾಜಿ ಸಚಿವರ ಭಾವ ಚಿತ್ರಗಳನ್ನು ಅಂಟಿಸಲಾಗಿತ್ತು. ಅಲ್ಲದೇ ಇವುಗಳನ್ನು ಮತದಾರರಿಗೆ ಹಂಚಲಾಗುತ್ತಿತ್ತು ಎನ್ನಲಾಗಿದೆ. ಈ ವೇಳೆ ಬಿಜೆಪಿಯ ಮುಖಂಡ ಯಶವಂತ ರಾವ್ ಜಾಧವ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಹಿನ್ನೆಲೆ ಗೋದಾಮಿನಲ್ಲಿ ಸಂಗ್ರಹಿಸಿದ್ದ ವಸ್ತುಗಳನ್ನು ಸೀಜ್ ಮಾಡಲಾಗಿತ್ತು. ಸೀಜ್ ಆದ ಕುಕ್ಕರ್ ಡಬ್ಬದ ಮೇಲೆ ಹಾಲಿ ಶಾಸಕ ಹಾಗೂ ಅವರ ಪುತ್ರರ ಭಾವಚಿತ್ರ ಅಂಟಿಸಿರುವುದ ಕಂಡು ಬಂದಿತ್ತು.
ಇದನ್ನೂ ಓದಿ: ದಾವಣಗೆರೆ: ₹7 ಲಕ್ಷ ಮೌಲ್ಯದ ಅಡುಗೆ ಸಲಕರಣೆ ವಶಕ್ಕೆ
35 ಕೋಟಿ ನಗದು ಜಪ್ತಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ ರಾಜ್ಯದಲ್ಲಿ ದಾಖಲೆ ರಹಿತ 35.42 ಕೋಟಿ ನಗದು ವಶ ಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಜೊತೆಗೆ 27.04 ಕೋಟಿ ರೂ. ಮೌಲ್ಯದ ಮದ್ಯ, 1.19 ಕೋಟಿ ರೂ. ಮೌಲ್ಯದ 146.20 ಕೆಜಿ ಡ್ರಗ್ಸ್ ಸೇರಿ 93.40 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಇದನ್ನೂ ಓದಿ: ಚುನಾವಣೆ ಬೆನ್ನಲ್ಲೇ ಗೋವಾದಿಂದ ಹರಿದು ಬರುತ್ತಿದೆ ಅಗ್ಗದ ಮದ್ಯ, ಕಂತೆ ಕಂತೆ ನೋಟು!!