ದಾವಣಗೆರೆ: ಶಿವಮೊಗ್ಗ, ದಾವಣಗೆರೆ ಜಿಲ್ಲೆಗೆ 2700 ಟನ್ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಇದ್ದು, ಇನ್ನೆರೆಡರಿಂದ ಮೂರು ದಿನಗಳಲ್ಲಿ ಪೂರೈಕೆ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದಲ್ಲಿ ಮಾತನಾಡಿದ ಅವರು, ಬೆಳೆ ಸರ್ವೇ ಆ್ಯಪ್ ಪರಿಚಯಿಸಿರುವುದರಿಂದ ರೈತರಿಗೆ ಅನುಕೂಲ ಆಗಲಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಮಯದಲ್ಲಿ ರೈತರೇ ನೇರವಾಗಿ ಮೊಬೈಲ್ನಲ್ಲಿ ಕಳುಹಿಸಿರುವುದರಿಂದ ಬೆಳೆ ನಷ್ಟ ಅಂದಾಜಿಸಲು ಕಷ್ಟ ಆಗದು. ಕೆಲವೊಮ್ಮೆ ಸರ್ವೇ ಸರಿಯಾಗಿ ನಡೆಯದೇ ಸಂಕಷ್ಟದಲ್ಲಿದ್ದ ರೈತರಿಗೆ ಬೆಳೆ ವಿಮೆ ಸಿಕ್ಕಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಕಳೆದ ಸಾಲಿನಲ್ಲಿ ಶೇಕಡಾ 40 ರಷ್ಟು ಬೆಳೆ ನಷ್ಟದ ಹೊಂದಾಣಿಕೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಈ ಆ್ಯಪ್ ಪರಿಚಯಿಸಲಾಗಿದೆ ಎಂದು ತಿಳಿಸಿದರು.
21 ನೇ ಶತಮಾನದಲ್ಲಿ ಎಲ್ಲಾ ರೈತರ ಕೈಯಲ್ಲಿ ಆಂಡ್ರೈಡ್ ಮೊಬೈಲ್ ಇದೆ. ಮಹಿಳೆಯರು ವ್ಯಾಟ್ಸಪ್, ಯೂಟ್ಯೂಬ್ ವೀಕ್ಷಣೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಆ್ಯಪ್ನಲ್ಲಿ ರೈತರು ಬೆಳೆ ನಷ್ಟ ಕಳುಹಿಸಲು ಸಮಸ್ಯೆ ಆಗದು ಎಂಬ ಅಭಿಪ್ರಾಯಕ್ಕೆ ಎಲ್ಲರಿಂದಲೂ ಮನ್ನಣೆ ಸಿಕ್ಕಿದೆ. ಮಾತ್ರವಲ್ಲ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಮೋಸ ಆಗುವುದಿಲ್ಲ. ರೈತರು ಆರ್ಥಿಕವಾಗಿ ಸಬಲರಾದರೆ ಮಾರುಕಟ್ಟೆ ಸಮಸ್ಯೆ ಎದುರಾಗದು. ಈ ನಿಟ್ಟಿನಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಯೋಜನೆ ರೂಪಿಸಿದ್ದಾರೆ. ಇದು ಈಡೇರಿದರೆ ರೈತರ ಬದುಕು ಹಸನಾಗಲಿದೆ ಎಂದರು.