ಹರಿಹರ: ನಗರದಲ್ಲಿ ಮತ್ತೆರಡು ಪಾಸಿಟಿವ್ ಪ್ರಕರಣ ಸೋಮವಾರ ಸಂಜೆ ಬೆಳಕಿಗೆ ಬಂದಿದ್ದು, ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ ಎಂದು ತಹಶೀಲ್ದಾರ್ ಕೆ.ಬಿ ರಾಮಚಂದ್ರಪ್ಪ ತಿಳಿಸಿದ್ದಾರೆ.
ನಗರದ ಶಿವಮೊಗ್ಗ ಸರ್ಕಲ್ ಬಳಿ ಇರುವ ಕಂಟೈನ್ಮೆಂಟ್ ಝೋನ್‌ನ ಸೋಂಕಿತ ಗರ್ಬಿಣಿ ಮಹಿಳೆಯ ದ್ವಿತೀಯ ಸಂಪರ್ಕಿತರಾದ 40 ವರ್ಷದ ಮಹಿಳೆ ಹಾಗೂ 16 ವರ್ಷದ ಬಾಲಕಿಯಲ್ಲಿ ಕೊರೊನಾ ಸೋಂಕು ದೃಡಪಟ್ಟಿದೆ.
ಮಾಹಿತಿ ತಿಳಿದ ಕೂಡಲೇ ಆರೋಗ್ಯ ಹಾಗೂ ಪೊಲೀಸ್ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೋಂಕಿತರನ್ನು ಜಿಲ್ಲಾಸ್ಪತ್ರೆಗೆ ಕರೆದು ಕೊಂಡು ಹೊಗಲು ಮುಂದಾದಾಗ, ಸೋಂಕಿತ ಮಹಿಳೆಯ ಮಗ ಪ್ರತಿರೋಧ ವ್ಯಕ್ತಪಡಿಸಿ ನಾವು ನಾಲ್ವರೂ ಒಂದೇ ಕುಟುಂಬದವರು, ಇಬ್ಬರಿಗೆ ಮಾತ್ರ ಸೋಂಕು ಕಾಣಿಸಿಕೊಳ್ಳಲು ಹೇಗೆ ಸಾಧ್ಯ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಘಟನೆ ನಡೆಯಿತು.
ಹಿರಿಯ ಆರೋಗ್ಯ ಸಹಾಯಕರು ಮತ್ತು ಅಧಿಕಾರಿಗಳು ಪ್ರತಿರೋಧ ವ್ಯಕ್ತಪಡಿಸುತ್ತಿದ್ದ ವ್ಯಕ್ತಿಗೆ ಸೋಂಕಿನ ಬಗ್ಗೆ ಮಾಹಿತಿಯನ್ನು ನೀಡಿ, ಮನವೊಲಿಸಿ ಸೋಂಕಿತರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಿ, ಉಳಿದ ಇಬ್ಬರೂ ಸದಸ್ಯರನ್ನು ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಯಿತು.
ಸ್ಥಳಕ್ಕೆ ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ, ಟಿಎಚ್‌ಒ ಡಾ.ಚಂದ್ರಮೋಹನ್, ಹಿರಿಯ ಆರೋಗ್ಯ ಸಹಾಯಕರಾದ ಎಂ.ಉಮ್ಮಣ್ಣ, ಎಂ.ವಿ.ಹೊರಕೇರಿ, ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿದರು.