ದಾವಣಗೆರೆ : ಕೊರೊನಾದಿಂದಾಗಿ ತಮ್ಮ ಪೋಷಕರನ್ನು ಕಳೆದುಕೊಂಡ ಅನಾಥ ಮಕ್ಕಳ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು ಇಂದು ವಿಡಿಯೋ ಕಾನ್ಪರನ್ಸ್ ಮೂಲಕ ನೆರವಿನ ಹಸ್ತ ಚಾಚಿದ್ದಾರೆ. ಇಂದು ಇಡೀ ದೇಶಾದ್ಯಂತ ನಡೆದ ಕಾರ್ಯಕ್ರಮದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯಡಿ 10 ಲಕ್ಷ ರೂ. ಬಾಂಡ್ ನೀಡುವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು. ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ನಿಮ್ಮ ಜೊತೆ ಸರ್ಕಾರ ಇದೆ. ನಿಮ್ಮ ಕುಟುಂಬದ ಜೊತೆ ನಾನಿದ್ದೇನೆ ಎಂದು ಅಭಯ ನೀಡಿದರು.
ದಾವಣಗೆರೆ ನಾಲ್ಕು ಮಕ್ಕಳಿಗೆ ನೆರವಿನ ಹಸ್ತ: ದಾವಣಗೆರೆ ಜಿಲ್ಲೆಯಲ್ಲಿ ಪೋಷಕರನ್ನು ಕಳೆದುಕೊಂಡು ಅನಾಥರಾದ 4 ಮಕ್ಕಳಿಗೆ ಪಿಎಂ ಕೇರ್ಸ್ ಪಾರ್ ಚಿಲ್ಡ್ರನ್ ಯೋಜನೆಯಲ್ಲಿ 10 ಲಕ್ಷ ಬಾಂಡ್ ನೀಡಲಾಗಿದೆ. ದಾವಣಗೆರೆ ಹೊನ್ನಾಳಿ ತಾಲೂಕಿನ ಎನ್ ಯುಕ್ತಿ , ಮಣಿಕಂಠ ಹಾಗೂ ದಾವಣಗೆರೆ ಸತೀಶ್, ರಮೇಶ್ ನಾಯ್ಕ್ ಎಂಬವರು 10 ಲಕ್ಷ ಬಾಂಡ್ ಪಡೆದ ಪಲಾನುಭವಿಗಳಾಗಿದ್ದಾರೆ. ಇವರಿಗೆ 23 ವರ್ಷವಾದ ಬಳಿಕ ಬಾಂಡ್ ಮೊತ್ತ ಆ ಮಕ್ಕಳಿಗೆ ಲಭ್ಯವಾಗಲಿದೆ. ಬಾಂಡ್ ನೀಡಿದ ಬಾಲಕಿ ಯುಕ್ತಿಗೆ ಸ್ವತಃ ಪ್ರಧಾನಮಂತ್ರಿ ಮೋದಿಯವರು ಪತ್ರ ಬರೆದಿದ್ದಾರೆ.
ಯುಕ್ತಿಗೆ ಪತ್ರ ಬರೆದ ಪಿಎಂ ಮೋದಿ : ಪ್ರೀತಿಯ ಮಿಸ್ ಯುಕ್ತಿ ಎನ್, ಶುಭಾಶಯಗಳು, ಇಂದು ನಾನು ನಿಮಗೆ ಪ್ರಧಾನಮಂತ್ರಿಯಾಗಿ ಪತ್ರವನ್ನು ಬರೆಯುತ್ತಿಲ್ಲ, ಓರ್ವ ಕುಟುಂಬದ ಸದಸ್ಯನಾಗಿ ಪತ್ರ ಬರೆಯುತ್ತಿದ್ದೇನೆ, ಕಳೆದ ಎರಡು ವರ್ಷಗಳಲ್ಲಿ ಮಾರಕ ಕೊರೊನಾಗೆ ಜಗತ್ತಿನಾದ್ಯಂತ ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಈ ಸಾಂಕ್ರಾಮಿಕದಲ್ಲಿ ತಮ್ಮ ಪೋಷಕರನ್ನು ಕಳೆದುಕೊಂಡು ನೀವು ಅನುಭವಿಸುತ್ತಿರುವ ನೋವು ವ್ಯಕ್ತಪಡಿಸಲು ಪದಗಳು ಸಾಲದು.
ನನ್ನ ಬಾಲ್ಯದಲ್ಲಿ ನನ್ನ ತಾಯಿ ಹೇಳುತ್ತಿದ್ದ ಕೆಲವು ಸಂಗತಿಗಳು ಇಂದು ನನಗೆ ನೆನಪಾಗುತ್ತಿವೆ. ವಾಸ್ತವ ಎಂದರೆ, ಸುಮಾರು 100 ವರ್ಷಗಳ ಹಿಂದೆ ನನ್ನ ಕುಟುಂಬ ಕೂಡ ಇಂತಹುದೇ ದುರಂತ ಮತ್ತು ನೋವಿಗೆ ಒಳಗಾಗಿದೆ. ಶತಮಾನದ ಹಿಂದೆ, ಇಂದಿನಂತೆ ಇಡೀ ವಿಶ್ವ ಭೀಕರ ಸಾಂಕ್ರಾಮಿಕಕ್ಕೆ ತುತ್ತಾಗಿದ್ದಾಗ, ನನ್ನ ತಾಯಿ ಕೂಡ ತನ್ನ ತಾಯಿಯನ್ನು ಅಂದರೆ ನನ್ನ ಅಜ್ಜಿ ಕಳೆದುಕೊಂಡಿದ್ದರು.
ಆಗ ನನ್ನ ತಾಯಿ ಎಷ್ಟು ಚಿಕ್ಕವರಾಗಿದ್ದರೆಂದರೆ ಆಕೆಗೆ ತನ್ನ ತಾಯಿಯ ಮುಖವೂ ಕೂಡ ನೆನಪಿರಲಿಲ್ಲ. ಆಕೆ ಇಡೀ ಜೀವನವನ್ನು ತನ್ನ ತಾಯಿಯಿಲ್ಲದ ಆಕೆಯ ಪ್ರೀತಿಯಿಂದ ಕಳೆದರು. ಅವರು ಹೇಗೆ ಬೆಳೆದಿರಬಹುದು ಯೋಚಿಸಿ. ಆದ್ದರಿಂದ ಇಂದು ನಾನು ನಿಮ್ಮ ಮನಸ್ಸಿನಲ್ಲಿರುವ ಆಕ್ರೋಶವನ್ನು, ನಿಮ್ಮ ಹೃದಯದಲ್ಲಿರುವ ತೊಳಲಾಟವನ್ನುಅರ್ಥಮಾಡಿಕೊಳ್ಳಬಲ್ಲೆ.
ಪೋಷಕರ ಉಪಸ್ಥಿತಿ ಸದಾ ಮಕ್ಕಳಿಗೆ ಭಾರಿ ಬೆಂಬಲ ನೀಡುತ್ತದೆ. ಇಲ್ಲಿಯವರೆಗೆ ನಿಮ್ಮ ಪೋಷಕರು ನಿಮಗೆ ಸರಿ ಒಳಿತು ಮತ್ತು ಕೆಡುಕಿನ ವ್ಯತ್ಯಾಸದ ಬಗ್ಗೆ ಹೇಳಿದ್ದಾರೆ ಮತ್ತು ನಿಮಗೆ ಮಾರ್ಗದರ್ಶನ ಮಾಡಿದ್ದಾರೆ. ಇಂದು ಅವರು ನಿಮ್ಮೊಡನಿಲ್ಲವಾದ್ದರಿಂದ ನಿಮ್ಮ ಜವಾಬ್ದಾರಿ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ನಿಮ್ಮ ಜೀವನದಲ್ಲಿ ಉಂಟಾಗಿರುವ ಶೂನ್ಯವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ, ಆದರೆ ಒಂದು ಕುಟುಂಬವಾಗಿ ನಿಮ್ಮ ಹೋರಾಟಗಳು, ಕಷ್ಟಗಳು ಮತ್ತು ನಿಮ್ಮ ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ನೀವು ಒಬ್ಬಂಟಿಯಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಇಡೀ ದೇಶವೇ ನಿಮ್ಮೊಂದಿಗಿದೆ.
ದೇಶದ ದೃಢ ಹೆಜ್ಜೆ: ಮಕ್ಕಳಿಗಾಗಿ ಪಿಎಂ ಕೇರ್ಸ್ ಯೋಜನೆಯು ನಿಮ್ಮ ಸುವರ್ಣ ಭವಿಷ್ಯ ಕ್ಕಾಗಿ ದೇಶದ ದೃಢ ಹೆಜ್ಜೆಯಾಗಿದೆ. ಈ ಯೋಜನೆಯು ನೀವು ಮುಕ್ತವಾಗಿ ಕನಸು ಕಾಣಬಹುದು ಮತ್ತು ನಿಮ್ಮ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುವಲ್ಲಿ ಸಹಕಾರಿಯಾಗುತ್ತದೆ. ನೀವು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು. ಈ ಪತ್ರದೊಂದಿಗೆ ಯೋಜನೆಯ ಮಾಹಿತಿಯ ವಿವರಗಳು ಪ್ರತಿಯನ್ನು ಲಗತ್ತಿಸಲಾಗಿದೆ. ನಿಮ್ಮ ಉತ್ತಮ ಯೋಗಕ್ಷೇಮ ಮತ್ತು ಉಜ್ವಲ ಭವಿಷ್ಯಕ್ಕಾಗಿ ಶುಭಾಶಯಗಳೊಂದಿಗೆ, ಪ್ರಧಾನಿ ನರೇಂದ್ರಮೋದಿ.
ಮಕ್ಕಳಿಗಾಗಿ ಪಿಎಂ ಕೇರ್ಸ್ ಯೋಜನೆ 2021 : ಉಚಿತ ಶಾಲಾ ಶಿಕ್ಷಣದ ಜೊತೆಗೆ ಉನ್ನತ ಶಿಕ್ಷಣಕ್ಕಾಗಿ ಶೈಕ್ಷಣಿಕ ಸಾಲದ ನೆರವು, ಶಿಕ್ಷಣದ ಸಾಲದ ಮೇಲಿನ ಬಡ್ಡಿಯನ್ನು ಪಿಎಂ ಕೇರ್ಸ್ ಭರಿಸುತ್ತದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 23 ವರ್ಷ ತುಂಬುವವರೆಗೆ 5 ಲಕ್ಷ ರೂ. ವರೆಗೆ ಆರೋಗ್ಯ ವಿಮೆಯ ನೆರವು, ವಿಮೆಯ ಪ್ರೀಮಿಯಂ ಮೊತ್ತವನ್ನು ಪಿಎಂ-ಕೇರ್ಸ್ ನಿಧಿಯಿಂದ ಭರಿಸಲಾಗುವುದು. 18 ವರ್ಷ ತುಂಬುವವರೆಗೆ ದೈನಂದಿನ ಅಗತ್ಯಗಳಿಗಾಗಿ ಪ್ರತಿ ತಿಂಗಳು ಆರ್ಥಿಕ ಸಹಾಯಧನ, 3 ವರ್ಷ ಪೂರ್ಣಗೊಳಿಸಿದ ಬಳಿಕ ಪಿಎಂ ಕೇರ್ಸ್ ನಿಧಿಯಿಂದ 10 ಲಕ್ಷ ರೂ. ಆರ್ಥಿಕ ನೆರವು. 1-12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಾರ್ಷಿಕ 20,000 ರೂ. ವಿದ್ಯಾರ್ಥಿವೇತನ ಕೌಶಲ್ಯ ತರಬೇತಿಗಾಗಿ ಕರ್ಮ ವಿದ್ಯಾರ್ಥಿ ವೇತನ,ತಾಂತ್ರಿಕ ಶಿಕ್ಷಣಕ್ಕಾಗಿ ಸ್ವನತ್ ವಿದ್ಯಾರ್ಥಿವೇತನ ಈ ಯೋಜನೆಯ ಮೂಲಕ ಲಭ್ಯವಾಗಲಿದೆ.
50,000 ರೂ. ಪರಿಹಾರಧನ ವಿತರಣೆ : ದಿನಾಂಕ 11.03.2020ರ ನಂತರದಲ್ಲಿ ಕೋವಿಡ್ ನಿಂದ ಪೋಷಕರಿಬ್ಬರನ್ನು ಕಳೆದುಕೊಂಡಂತಹ ಮಕ್ಕಳಿಗೆ ಕೇಂದ್ರ ಸರ್ಕಾರದ "PM CARES for Children” ಯೋಜನೆಯಡಿ ಪರಿಹಾರ ಧನವನ್ನು ವಿತರಿಸಲಾಗುತ್ತದೆ. ರಾಜ್ಯದಲ್ಲಿಯೂ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಭಾರತ ಸರ್ಕಾರವು PM CARES Portal ನಲ್ಲಿ ಅನುಮೋದನೆಗೊಂಡಿರುವ ಎಲ್ಲ ಮಕ್ಕಳಿಗೆ ಸೌಲಭ್ಯ ದೊರೆಯುತ್ತದೆ.
ಓದಿ : UPSC ಫಲಿತಾಂಶ ಪ್ರಕಟ: ಶ್ರುತಿ ಶರ್ಮಾ ಟಾಪರ್; ಅಗ್ರ 4 ಸ್ಥಾನ ಮಹಿಳೆಯರ ಸಾಧನೆ