ಮಂಗಳೂರು: ವಿದ್ಯಾರ್ಥಿಗಳಲ್ಲಿ ರಾಜಕೀಯ ಆಸಕ್ತಿ ಮೂಡಿಸುವ ಹಾಗೂ ಶಾಸನ ಸಭೆಯ ಕಲಾಪದ ಕುರಿತು ಪರಿಚಯಿಸುವ ನಿಟ್ಟಿನಲ್ಲಿ ಜಿಲ್ಲಾಮಟ್ಟದ ಯುವ ಸಂಸತ್ ಸ್ಪರ್ಧೆ ದ.ಕ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.
ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಅನುಭವಿ ರಾಜಕಾರಣಿಗಳ ಸದನದ ಕಲಾಪಗಳಂತೆ ಸಭೆ ನಡೆಸಿದರು. ಯುವ ಸಂಸತ್ ಸ್ಪರ್ಧೆಯಲ್ಲಿ ಚುನಾವಣೆ ಮೂಲಕ ಆಯ್ಕೆಯಾದ ಮಂತ್ರಿ ಮಂಡಲವೊಂದು ಪ್ರಮಾಣ ವಚನ ಸ್ವೀಕರಿಸುವಲ್ಲಿಂದ ಸಭೆ ಆರಂಭವಾಗಿ ಸಭಾಧ್ಯಕ್ಷರು, ಆಡಳಿತ ಪಕ್ಷ, ವಿರೋಧ ಪಕ್ಷಗಳಾಗಿ ವಿದ್ಯಾರ್ಥಿಗಳು ಪ್ರಸ್ತುತ ಸಮಸ್ಯೆಗಳ ಕುರಿತು ಮಹತ್ವದ ಚರ್ಚೆ ನಡೆಸಿದರು.
ಶಾಲಾ-ಕಾಲೇಜಿನ ಹತ್ತಿರ ಅಮಲು ಪದಾರ್ಥಗಳ ಮಾರಾಟ, ಪ್ರವಾಹ ಸಮಸ್ಯೆ, ಬಾಲ ಕಾರ್ಮಿಕರ ಸಮಸ್ಯೆ, ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ಯುವ ಸಂಸತ್ ಸಭೆಯಲ್ಲಿ ಮಕ್ಕಳು ಬೆಳಕು ಚೆಲ್ಲಿದರು. ಸಭೆಯನ್ನು ಉತ್ತಮವಾಗಿ ನಿರ್ವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.