ಬಂಟ್ವಾಳ: ಬಿ.ಸಿ ರೋಡ್ನಿಂದ ಮುಲ್ಕಿಯವರೆಗೆ ರಸ್ತೆ ಬದಿಯಲ್ಲಿರುವ ನಿರ್ಗತಿಕರು, ಚೆಕ್ ಪೋಸ್ಟ್ಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸರು ಸೇರಿದಂತೆ ಸುಮಾರು 600 ಮಂದಿಗೆ ಊಟ ನೀಡುವ ಮೂಲಕ ಬಂಟ್ವಾಳದ ಯುವಕಎಲ್ಲರಿಗೂ ಮಾದರಿಯಾಗಿದ್ದಾರೆ. ಬಿಜೈ ಕಾಪಿಕಾಡಿನ ಸ್ನೇಹದೀಪ್ ಹೋಮ್ ಫಾರ್ ಚಿಲ್ಡ್ರನ್ಸ್ ಸಂಸ್ಥೆ ಹಾಗೂ ಮುಲ್ಕಿಯ ಮೈಮುನಾ ಫೌಂಡೇಶನ್ ಆಶ್ರಮವಾಸಿಗಳಿಗೂ ಊಟ ನೀಡಿದ್ದಾರೆ.
ಮೇ 2ರಂದು ಬಂಟ್ವಾಳದ ಅಜಿಲಮೊಗರಿನ ಅಭಿಷೇಕ್ ಸುವರ್ಣ ಹಾಗೂ ಆತನ ಸ್ನೇಹಿತರು ಈ ಕಾರ್ಯ ಮಾಡಿದ್ದು, ಮುಂದಿನ ದಿನಗಳಲ್ಲಿ ಲಾಕ್ಡೌನ್ ಆದರೆ ಆ ಸಮಯದಲ್ಲಿ ಪ್ರತೀ ವಾರ ಈ ರೀತಿ ಊಟ ನೀಡುವ ಯೋಜನೆ ರೂಪಿಸಿದ್ದಾರೆ. ಪಿಕ್ಆಪ್ ವಾಹನದ ಮೂಲಕ ಸಸ್ಯಹಾರ ಹಾಗೂ ಮಾಂಸಾಹಾರ ಎರಡೂ ಬಗೆಯ ಆಹಾರವನ್ನೂ ನೀಡಿದ್ದಾರೆ. ಊಟದ ಜತೆಗೆ ನೀರಿನ ಬಾಟಲ್ ಹಾಗೂ ಕೋವಿಡ್ನಿಂದ ರಕ್ಷಣೆಗೆ ಮಾಸ್ಕ್ ನೀಡಿ ಅದನ್ನು ಬಳಕೆ ಮಾಡುವಂತೆಯೂ ಕಿವಿಮಾತು ಹೇಳಿದ್ದಾರೆ.
ಅಭಿಷೇಕ್ ಜತೆಗೆ ಅವರ ಸ್ನೇಹಿತರಾದ ನಟರಾಜ್ ಸುವರ್ಣ, ಕ್ಯಾನನ್ ಲೋಬೊ, ಧೀರ್ ಡಿಸೋಜಾ, ಲತೀಶ್ ಪೂಜಾರಿ, ಸಂದೀಪ್ ಶೆಟ್ಟಿ, ಪ್ರಕಾಶ್ ಅಂಚನ್, ಸಂತೋಷ್ ಕುಲಾಲ್, ಗಿರೀಶ್ ಕುಲಾಲ್, ಶಿವಾನಂದ್, ನಿತೇಶ್ ಪೂಜಾರಿ ಹಾಗೂ ಜಗದೀಶ್ ಪೂಜಾರಿ ಸಹಕರಿಸಿದ್ದಾರೆ.
ಅನ್ನಕ್ಕಾಗಿ ಪರಿತಪಿಸುವವರ ಒಂದು ದಿನದ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಲಾಗಿದ್ದು, ಮುಂದೆ ಪ್ರತೀ ವಾರ ಇದೇ ರೀತಿ ಊಟ ನೀಡುವ ಆಲೋಚನೆ ಇದೆ ಎಂದು ಅಭಿಷೇಕ್ ತಿಳಿಸಿದ್ದಾರೆ.