ಮಂಗಳೂರು : ಪ್ರೇಯಸಿ ಸುತ್ತಾಟಕ್ಕೆ ಬಂದಿಲ್ಲವೆಂದು ಯುವಕನೊಬ್ಬ ಪಿ ಜಿ ಹಾಸ್ಟೆಲ್ ಕಟ್ಟಡಕ್ಕೆ ಕಲ್ಲೆಸೆದು ದಾಂಧಲೆ ನಡೆಸಿದ ಘಟನೆ ನಗರದಲ್ಲಿ ನಡೆದಿದೆ. ನಗರದ ಆಗ್ನೆಸ್ ಕಾಲೇಜು ಬಳಿ ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಜಮಾಯಿಸಿದ ಜನತೆ ಹಿಡಿದು ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.
ಸುಳ್ಯ ಮೂಲದ ವಿವೇಕ್ (18) ಎಂಬಾತ ಈ ಕೃತ್ಯ ಎಸಗಿದಾತ. ಈತ ಮಂಗಳೂರಿನಲ್ಲಿ ಇಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದ. ನಗರದ ಆಗ್ನೆಸ್ ಬಳಿಯ ವಿದ್ಯಾರ್ಥಿನಿಯರ ಪಿಜಿಯಲ್ಲಿ ಕೆಲಸಕ್ಕಿದ್ದ ಈತ ಯುವತಿಯೊಂದಿಗೆ ಪ್ರೀತಿ ಹೊಂದಿದ್ದ. ಗುರುವಾರ ಸಂಜೆ ಆಕೆಗೆ ಕರೆ ಮಾಡಿ, ಹೊರಗೆ ಸುತ್ತಾಡಲು ಬರುವಂತೆ ಕೇಳಿಕೊಂಡಿದ್ದಾನೆ. ಆದರೆ ಯುವಕನ ಆಹ್ವಾನವನ್ನು ಯುವತಿ ನಿರಾಕರಿಸಿದ್ದಾಳೆ.
ಪದೇ ಪದೆ ಕರೆ ಮಾಡಿದರೂ ಕೆಲಸ ಇದೆಯೆಂದು ಹೇಳಿ ಆಕೆ ನಿರಾಕರಿಸಿದ್ದರಿಂದ ಸಿಟ್ಟಿಗೆದ್ದ ಯುವಕ ಪಿಜಿ ಹಾಸ್ಟೆಲ್ ಮೇಲೆ ಕಲ್ಲು ತೂರಾಟ ಮಾಡಿ ದಾಂಧಲೆ ಮಾಡಿದ್ದಾನೆ. ಪರಿಣಾಮ ಹಾಸ್ಟೆಲ್ನ ಕಿಟಕಿ, ಗಾಜು ಒಡೆದು ಹೋಗಿದೆ. ಯುವಕನನ್ನು ತಕ್ಷಣ ಸ್ಥಳೀಯರು ಹಿಡಿದು ಥಳಿಸಿದ್ದಾರೆ. ಬಳಿಕ ಕದ್ರಿ ಪೊಲೀಸರನ್ನು ಕರೆಸಿ ಅವರ ವಶಕ್ಕೆ ಒಪ್ಪಿಸಿದ್ದಾರೆ. ಯುವಕನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಅಂತರ ಕಾಯ್ದುಕೊಂಡಿದ್ದಕ್ಕೆ ಕೋಪ; ಪ್ರಿಯಕರನಿಗೆ ಚಾಕುವಿನಿಂದ ಇರಿದ ಪ್ರೇಯಸಿ
ಪ್ರಿಯಕರನಿಗೆ ಚಾಕುವಿನಿಂದ ಇರಿದ ಪ್ರೇಯಸಿ : ಕೆಲವು ತಿಂಗಳ ಹಿಂದೆ ಪ್ರೇಯಸಿಯೇ ಪ್ರಿಯಕರನಿಗೆ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನ ವಿವೇಕನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಜೋಗೇಶ್ ಇರಿತಕ್ಕೊಳಗಾದ ಯುವಕ ಎಂಬುದು ತಿಳಿದು ಬಂದಿತ್ತು. ಆರೋಪಿ ಮಹಿಳೆ ಬರೂತಿಯನ್ನು ವಿವೇಕನಗರ ಪೊಲೀಸರು ವಶಕ್ಕೆ ಪಡೆದಿದ್ದರು.
ಅಸ್ಸೋಂ ಜೋಡಿ : ಅಸ್ಸಾಂ ಮೂಲದವರಾದ ಜೋಗೇಶ್ ಮತ್ತು ಬರೂತಿ ಪರಸ್ಪರ ಪ್ರೀತಿಸುತ್ತಿದ್ದರು. ಆರೋಪಿ ಮಹಿಳೆ ಡೇ ಕೇರ್ನಲ್ಲಿ ಆಯಾ ಆಗಿದ್ದರೆ, ಜೋಗೇಶ್ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಈ ಮೊದಲೇ ಒಂದು ಮದುವೆಯಾಗಿ ಗಂಡನಿಂದ ಈ ಮಹಿಳೆ ದೂರಾಗಿದ್ದಳು. ಬಳಿಕ ಜೋಗೇಶ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು. ಇಬ್ಬರೂ ಸಹ ವಿವೇಕನಗರ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದರು. ಪ್ರೇಯಸಿ ಬಳಿ ಯುವಕ ಸಾಕಷ್ಟು ಹಣ ಪಡೆದುಕೊಂಡಿದ್ದ. ಇತ್ತೀಚಿಗೆ ಆಕೆಯಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದ. ಪ್ರಿಯಕರನ ವರ್ತನೆಯಿಂದ ರೊಚ್ಚಿಗೆದ್ದ ಮಹಿಳೆ ಜಗಳ ತೆಗೆದಿದ್ದಳು. ಈ ಜಗಳ ಅತಿರೇಕಕ್ಕೆ ಹೋದ ವೇಳೆ ಪ್ರಿಯಕರನಿಗೆ ಚಾಕುವಿನಿಂದ ಇರಿದಿದ್ದಳು.