ಮಂಗಳೂರು : ವಿದೇಶದಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ ತಾತ್ಕಾಲಿಕ ವಿಸಾದಲ್ಲಿ ಇಂಡೋನೇಷ್ಯಾಕ್ಕೆ ಕಳುಹಿಸಿ ಮೂರು ತಿಂಗಳ ಕಾಲ ಜೈಲು ಅನುಭವಿಸುವಂತೆ ಮಾಡಿರುವುದಲ್ಲದೆ ನನಗೆ ಆರು ಲಕ್ಷ ರೂ. ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಯುವಕನೋರ್ವ ದೂರು ಸಲ್ಲಿಸಿದ್ದಾನೆ.
ಮಹಮ್ಮದ್ ನಿಯಾಝ್ ಎಂಬುವರು ಶಂಶೀರ್ ರಿಜ್ವಾನ್ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ. ಮಂಗಳೂರಿನ ಬಂದರ್ನಲ್ಲಿರುವ ಟೂರ್ಸ್ ಅಂಡ್ ಟ್ರಾವೆಲ್ಸ್ ಸಂಸ್ಥೆಯ ಮಾಲೀಕ ಶಂಶೀರ್ ರಿಜ್ವಾನ್, ನನಗೆ ದಕ್ಷಿಣ ಕೊರಿಯಾದಲ್ಲಿ 2 ಲಕ್ಷ ರೂ. ಸಂಬಳದ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದರು.
ಅದಕ್ಕಾಗಿ ಆರು ಲಕ್ಷ ರೂ. ನಗದು ಬೇಡಿಕೆಯಿಟ್ಟಿದ್ದ. ಅದರಂತೆ ತಾನು 2019 ಜುಲೈ 6ರಂದು 3.50 ಲಕ್ಷ ರೂ. ಹಾಗೂ 2020 ಫೆಬ್ರವರಿ 23ರಂದು ಇಂಡೋನೇಷ್ಯಾದಲ್ಲಿ 2.50 ಲಕ್ಷ ರೂ. ನೀಡಿದ್ದೇನೆ. ಮೊದಲ ಕಂತಿನ ಹಣ ಪಡೆದ ಬಳಿಕ ನೇರವಾಗಿ ದಕ್ಷಿಣ ಕೊರಿಯಾಕ್ಕೆ ವಿಸಾ ಇಲ್ಲ ಎಂದು ತಾತ್ಕಾಲಿಕ ವೀಸಾದಲ್ಲಿ ಇಂಡೋನೇಷ್ಯಾಕ್ಕೆ ನನ್ನನ್ನು ಕಳುಹಿಸಲಾಗಿತ್ತು.
ಅಲ್ಲಿ ಸಣ್ಣ ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಆ ಮನೆಯಲ್ಲಿ ಇನ್ನೂ ಮೂವರು ಇದ್ದರು. ಆದರೆ, 2020 ಸೆಪ್ಟೆಂಬರ್ 6ರಂದು ಅಕ್ರಮ ವಾಸ್ತವ್ಯ ಹೂಡಿರುವ ಆರೋಪದ ಮೇಲೆ ನಮ್ಮನ್ನು ಇಂಡೋನೇಷ್ಯಾ ಪೊಲೀಸರು ಬಂಧಿಸಿದ್ದರು.
ಆ ಬಳಿಕ ಕಾನೂನು ಹೋರಾಟ ನಡೆಸಿ, ನಾವು ಜೈಲಿನಿಂದ ಹೊರ ಬಂದೆವು. ನಾವು ನಾಲ್ವರು ಜೈಲುಪಾಲಾದ ಬಳಿಕ ಶಂಶೀರ್ ರಿಜ್ವಾನ್ ನಮ್ಮ ಸಂಪರ್ಕವನ್ನೇ ಕಡಿದುಕೊಂಡಿದ್ದಾನೆ ಎಂದು ಮಹಮ್ಮದ್ ನಿಯಾಝ್ ಆರೋಪಿಸಿದ್ದಾನೆ. ಇನ್ನು, ನಾನು ಇಂಡೋನೇಷ್ಯಾದಿಂದ ಬಂದ ಬಳಿಕ ಆತನನ್ನು 2021ಜ.21ರಂದು ಉಳ್ಳಾಲ ದರ್ಗಾದ ಬಳಿ ಸಂಪರ್ಕಿಸಿದೆ.
ಈ ವೇಳೆ ಆತ 2 ಲಕ್ಷ ರೂ. ನೀಡುವುದಾಗಿ ತಿಳಿಸಿದ್ದ. ಆದರೆ, ಇದುವರೆಗೂ ಹಣ ಹಿಂದಿರುಗಿಸಿಲ್ಲ. ಜೊತೆಗೆ ಇದೇ ರೀತಿ ಹಲವರಿಗೆ ವಂಚನೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ತಕ್ಷಣ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಮಹಮ್ಮದ್ ತಿಳಿಸಿದ್ದಾರೆ.