ಮಂಗಳೂರು : ಪೋರ್ಚುಗೀಸರ ವಿರುದ್ಧ ಹೋರಾಡಿದ ಭಾರತದ ಪ್ರಥಮ ಮಹಿಳೆಯೆಂಬ ಖ್ಯಾತಿ ಹೊಂದಿರುವ ಅಪ್ರತಿಮ ಧೈರ್ಯಶಾಲಿ ಉಳ್ಳಾಲದ ರಾಣಿ ಅಬ್ಬಕ್ಕಳ ಚಿತ್ರ ಬಿಡಿಸುವ ಮೂಲಕ ಯುವ ಕಲಾವಿದ ಸಾತ್ವಿಕ್ ನೆಲ್ಲಿತೀರ್ಥ 74ನೇ ಸ್ವಾತಂತ್ರ್ಯದ ದಿನದ ಸಂದರ್ಭದಲ್ಲಿ ವಿಶೇಷ ನಮನ ಸಲ್ಲಿಸಿದ್ದಾರೆ.
ಶುಭ್ರ ವಸ್ತ್ರದಲ್ಲಿ ವೀರಗಚ್ಚೆ ಧರಿಸಿ, ವೀರಾವೇಶದಿಂದ ಹೇಷಾರವ ಮಾಡುತ್ತಿರುವ ಕುದುರೆಯ ಮೇಲೆ ಕುಳಿತಿರುವ ಅಬ್ಬಕ್ಕ, ಕೈಯಲ್ಲಿ ಪಂಜು ಹಿಡಿದು ಯುದ್ಧದಲ್ಲಿ ಪೋರ್ಚುಗೀಸರ ವಿರುದ್ಧ ಹೋರಾಡುತ್ತಿರುವುದು, ಅಬ್ಬಕ್ಕಳ ಸೈನ್ಯದ ದಾಳಿಗೆ ಪೋರ್ಚುಗೀಸರ ನೌಕೆಗಳು ಹೊತ್ತಿ ಉರಿಯುತ್ತಿರುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರದಲ್ಲಿ ತುಳುನಾಡಿನ ಬಾವುಟವೂ ಕಾಣ ಸಿಗುತ್ತದೆ. ಆಕರ್ಷಕವಾಗಿ ಮೂಡಿ ಬಂದಿರುವ ರಾಣಿಯ ಚಿತ್ರವನ್ನು ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆ ಮಾಡಲಾಗಿದೆ.
ಆಳ್ವಾಸ್ ಕಾಲೇಜಿನ ವಿಶ್ಯುವಲ್ ಆರ್ಟ್ ವಿಭಾಗದ ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಸಾತ್ವಿಕ್ ನೆಲ್ಲಿತೀರ್ಥ, ಹಲವು ಡಿಜಿಟಲ್ ಆರ್ಟ್ ಚಿತ್ರಗಳನ್ನು ಬಿಡಿಸಿದ್ದಾರೆ. ಇದೀಗ ರಚಿಸಿರುವ ಅಬ್ಬಕ್ಕಳ ಚಿತ್ರ ಆ್ಯಕ್ರಿಲಿಕ್ ಪೇಂಟಿಂಗ್ ಮಾದರಿಯಲ್ಲಿದೆ. ಚಿತ್ರಕಲೆ ಮಾತ್ರವಲ್ಲದೆ ಯಕ್ಷಗಾನ, ನಾಟಕ ಕ್ಷೇತ್ರದಲ್ಲಿಯೂ ಇವರು ತೊಡಗಿಸಿಕೊಂಡಿದ್ದಾರೆ. ಗೆಳೆಯ ಅಮರ್ ಕೋಟೆಯವರ ಸಲಹೆಯ ಮೇರೆಗೆ ಎರಡು ದಿನಗಳ ಕಾಲ ಶ್ರಮಪಟ್ಟು ಈ ಚಿತ್ರ ರಚಿಸಿದ್ದಾರೆ.
ಉಳ್ಳಾಲವನ್ನು ಕೇಂದ್ರವಾಗಿಟ್ಟು ರಾಜ್ಯವಾಳುತ್ತಿದ್ದ ರಾಣಿ ಅಬ್ಬಕ್ಕ, ಮೂಡುಬಿದಿರೆಯ ಚೌಟ ವಂಶಕ್ಕೆ ಸೇರಿದವರು. ಆದ್ದರಿಂದ ಈ ಚಿತ್ರವನ್ನು ಮೂಡುಬಿದಿರೆಯ ಚೌಟರ ಅರಮನೆಗೆ ನೀಡುತ್ತೇನೆ ಎಂದು ಕಲಾವಿದ ಹೇಳಿದ್ದಾರೆ.