ಶಿರಸಿ: ಕಾರ್ವಿಂಗ್ ಆರ್ಟ್(ಮರ ಕೆತ್ತನೆ) ನಮ್ಮ ರಾಜ್ಯದ ಅದ್ಭುತ ಕಲೆ. ಈ ಮರಕೆತ್ತನೆಯ ಕುಸುರಿ ಕೆಲಸದ ಹಿಂದೆ ಅದೆಷ್ಟೋ ಪರಿಶ್ರಮ ಇದೆ. ಇಂತಹ ಕಠಿಣ ಕುಸುರಿ ಕೆಲಸವನ್ನು ದತ್ತವಾಗಿಸಿಕೊಂಡಿದೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕುಟುಂಬ.
ಈ ಕುಟುಂಬಸ್ಥರು ತಯಾರಿಸಿದ ಕಲಾಕೃತಿಗಳು ಹೊರ ರಾಜ್ಯಗಳಲ್ಲದೇ, ವಿದೇಶಗಳಿಗೂ ರಫ್ತಾಗಿವೆ. ಈ ಮೂಲಕ ರಾಜ್ಯದ ಕಲೆಯನ್ನು ಸಾಗರದಾಚೆಗೂ ಪ್ರಖ್ಯಾತವಾಗುವಂತೆ ಮಾಡಿದೆ ಯಲ್ಲಾಪುರದ ಕುಟುಂಬ.
ಇವರು ಮಾಡುವ ಮರದ ಹಲವಾರು ಪ್ರತಿಮೆ, ರಥ, ಬಾಗಿಲುಗಳು ವಿಶ್ವ ಪ್ರಸಿದ್ಧವಾಗಿವೆ. ದೇಶ, ವಿದೇಶಗಳಿಂದ ಇವರಿಗೆ ಮರದ ಕೆತ್ತನೆಯ ಕಲಾಕೃತಿಗಳನ್ನು ಮಾಡಿಕೊಡಲು ಬೇಡಿಕೆ ಬರುತ್ತಿವೆ. ಆದಿತ್ಯ ಗುಡಿಗಾರ್ ಎಂಬುವ ಯುವ ಕೆತ್ತನೆಗಾರ ಇವೆಲ್ಲವುಗಳ ಸಾರಥ್ಯ ವಹಿಸಿಕೊಂಡಿದ್ದಾರೆ.
ಅಮೆರಿಕದ ದೇವಾಲಯಕ್ಕೂ ಬಾಗಿಲು ತಯಾರಿ
ಅಮೆರಿಕದ ನ್ಯೂ ಜೆರ್ಸಿಯಲ್ಲಿನ ಸ್ವಾಮಿ ನಾರಾಯಣ ದೇವಾಲಯಕ್ಕೆ ಇಲ್ಲಿಂದಲೇ ಬಾಗಿಲುಗಳು ತಯಾರಿಸಿ ಕೊಡಲಾಗಿದೆ. ಇಸ್ಕಾನ್ ಮಂದಿರಕ್ಕೂ ಕೂಡ ಇಲ್ಲಿಂದಲೇ ಬಾಗಿಲುಗಳ ರವಾನೆಯಾಗಿದೆ. ಇನ್ನು ರಾಜನಹಳ್ಳಿ ವಾಲ್ಮೀಕಿ ಪೀಠದ ಮೂಲರಥದ ನಿರ್ಮಾಣ ಮಾಡಿದ್ದು ಕೂಡ ಇವರೇ.
ಇದನ್ನೂ ಓದಿ: ವಾರಾಣಸಿಯಲ್ಲಿ 870 ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
ಸಚಿವ ಆನಂದ್ ಸಿಂಗ್ ಈ ರಥವನ್ನ ನಿರ್ಮಾಣ ಮಾಡಿಕೊಡಲು ಕೋರಿಕೊಂಡಿದ್ದರು. ಇದೀಗ ಗುಜರಾತ್ನ ಸ್ವಾಮಿ ನಾರಾಯಣ ದೇವಾಲಯಕ್ಕೆ ಸಂಪೂರ್ಣ ಬಾಗಿಲುಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದರ ಬೆಲೆ ಬರೋಬ್ಬರಿ 60 ಲಕ್ಷ ರೂಪಾಯಿ. ಅಂದರೆ ಇವರ ಮರ ಕೆತ್ತನೆಯ ಕುಸುರಿ ಕಲೆಗೆ ಎಷ್ಟು ಬೆಲೆ ಎಂಬುವನ್ನು ಇದು ತೋರಿಸುತ್ತದೆ.
ಮನೆಮಂದಿಯೆಲ್ಲಾ ಸೇರಿ ಕಲಾಕೃತಿಗಳ ರಚನೆ
ಈ ಗುಡಿಗಾರರ ಕುಟುಂಬ ತಯಾರಿಸುವ ಕೆತ್ತನೆಗಳಿಗೆ ವಿಪರೀತ ಬೇಡಿಕೆ ಇರುವ ಕಾರಣ ಮನೆಯ ಯುವಕರು ಹಾಗೂ ಮಹಿಳಾ ಸದಸ್ಯರೂ ಕೂಡ ಕೆತ್ತನೆಯಲ್ಲಿ ತೊಡಗಿಕೊಂಡಿದ್ದಾರೆ. ಸುಮಾರು 25 ಜನ ಕೆಲಸಗಾರರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಹಲವರು ಕೆತ್ತನೆಯನ್ನ ಕರಗತ ಮಾಡಿಕೊಳ್ಳುತ್ತಿದ್ದಾರೆ. ಇವರ ಜೀವನ ನಡೆದುಕೊಂಡು ಬಂದಿರೋದು ಕೂಡ ಈ ಕರಕುಶಲ ಕಲೆಯ ಮೂಲಕ. ಸಾಂಪ್ರದಾಯಿಕ ಕಲೆಗಳಿಗೆ ಒತ್ತು ನೀಡುವ ಮೂಲಕ ಉದ್ಯೋಗದ ಸೃಷ್ಟಿಯನ್ನು ಕೂಡ ಮಾಡ್ತಿದೆ ಈ ಕುಟುಂಬ.