ಮಂಗಳೂರು : ನಮ್ಮನ್ನು ಊರಿಗೆ ಕಳುಹಿಸಿಕೊಡಿ, ಇಲ್ಲವಾದರೆ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಹೊರ ರಾಜ್ಯಗಳ ನೂರಾರು ಕಾರ್ಮಿಕರು ನಗರದ ಗಣೇಶಪುರ ಮೈದಾನದಲ್ಲಿ ಪಟ್ಟುಹಿಡಿದು ಕುಳಿತ ಪ್ರಸಂಗ ನಡೆಯಿತು.
ಬಿಹಾರ ಮತ್ತು ಜಾರ್ಖಂಡ್ ಮೂಲದ ಸುಮಾರು 300 ಮಂದಿ ಕಾರ್ಮಿಕರು ಮೈದಾನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೂತಿದ್ದರು. ನಮಗಿಲ್ಲಿ ತಿನ್ನಲು ಅನ್ನ ಕೂಡ ಇಲ್ಲ. ಸರ್ಕಾರದ ಸೇವಾ ಸಿಂಧು ಸೈಟ್ ಮೂಲಕ ಆನ್ಲೈನ್ನಲ್ಲಿ ಕೆಲವರು ಅರ್ಜಿ ಸಲ್ಲಿಸಿದ್ದೇವೆ. ಸರ್ವರ್ ಸಮಸ್ಯೆಯಿಂದ ಇನ್ನೂ ಕೆಲವರದ್ದು ಆಗಿಲ್ಲ. ಆದ್ದರಿಂದ ಹೇಗಾದರು ಮಾಡಿ ನಮ್ಮನ್ನು ಊರಿಗೆ ಕಳುಹಿಸಿಕೊಡಿ. ನಾವು ಇಲ್ಲಿ ಯಾವುದೇ ಪ್ರತಿಭಟನೆ ಮಾಡಲು ಬಂದಿಲ್ಲ. ಸಮಸ್ಯೆ ಹೇಳಲು ಬಂದಿದ್ದೇವೆ. ನೀವು ಊರಿಗೆ ಕಳುಹಿಸಿಕೊಟ್ಟಿಲ್ಲ ಅಂದ್ರೆ ಉಪವಾಸ ಸತ್ಯಾಗ್ರಹ ಕೈಗೊಳ್ಖುತ್ತೇವೆ ಎಂದು ಸುರತ್ಕಲ್ ಠಾಣೆಯ ಪೊಲೀಸರ ಮುಂದೆ ಅಳಲು ತೋಡಿಕೊಂಡರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಹಾಗೂ ಪೊಲೀಸ್ ಆಯುಕ್ತರು, ಎರಡು ದಿನಗಳಲ್ಲಿ ಸರ್ವರ್ ಸಮಸ್ಯೆ ಸರಿಪಡಿಸಿ ನಿಮ್ಮನ್ನು ಊರಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಕಾರ್ಮಿಕರ ಮನವೊಲಿಸಿದರು. ಅಲ್ಲದೆ ಅವರಿಗೆ ಊಟದ ವ್ಯವಸ್ಥೆ ಮಾಡಿಕೊಟ್ಟರು.