ಬಂಟ್ವಾಳ(ದಕ್ಷಿಣ ಕನ್ನಡ): ರಾಜ್ಯ ಸರ್ಕಾರ ಕಾರ್ಮಿಕರ ಪರವಾಗಿ ಹೊರಡಿಸಿರುವ ಘೋಷಣೆಗಳಲ್ಲಿ ಸ್ಪಷ್ಟತೆ ಅಗತ್ಯ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಸಲಹೆ ನೀಡಿದ್ದಾರೆ. ಸರ್ಕಾರದ ನೆರವಿನಲ್ಲಿ ಹಲವು ಷರತ್ತುಗಳು ಇರುವ ಕಾರಣ ಹಲವಾರು ಕಾರ್ಮಿಕರು ನೆರವಿನಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಪ್ರತಿಯೊಬ್ಬ ಕಾರ್ಮಿಕರ ಪರವಾಗಿಯೂ ಸರ್ಕಾರ ನಿಲ್ಲಬೇಕು. ಇವರ ಕುರಿತು ಸ್ಪಷ್ಟ ನೀತಿ ಅನುಸರಿಸಬೇಕು. ಕಾರ್ಮಿಕರ ಕಲ್ಯಾಣಕ್ಕಾಗಿಯೇ ಇರುವ ಕೋಟ್ಯಂತರ ರೂಪಾಯಿ ನಿಧಿಯನ್ನು ಅವರಿಗಾಗಿಯೇ ಬಳಸಲು ಇದು ಸಕಾಲ. ಸಂಘಟಿತರಾಗಿರುವ ಕಾರ್ಮಿಕರೂ ಇಂದು ಲಾಕ್ಡೌನ್ನಿಂದ ಕೆಲಸವಿಲ್ಲದೆ ತೊಂದರೆ ಅನುಭವಿಸುತ್ತಿರುವ ವೇಳೆಯಲ್ಲಿ ಅವರ ಪಿಎಫ್, ಇಎಸ್ಐಯನ್ನು ಬಳಸಲು ಅವಕಾಶ ಮಾಡಿಕೊಡಬೇಕು ಎಂದಿದ್ದಾರೆ.
ಇದಕ್ಕೆ ಕಾನೂನು ತೊಡಕಿದ್ದರೆ ಅವುಗಳನ್ನು ನಿವಾರಿಸಬೇಕು. ಇಂಥಹ ವಿಷಯಗಳಲ್ಲಿ ಸ್ಪಷ್ಟ ತೀರ್ಮಾನಗಳನ್ನು ಕೈಗೊಳ್ಳುವುದು ಅವಶ್ಯಕ ಎಂದು ರೈ ಹೇಳಿದ್ದಾರೆ.
ಇನ್ನು ಹೊರ ರಾಜ್ಯದಲ್ಲಿರುವ ಜನರಿಗೆ ನೆರವಾಗುವ ಕಾರ್ಯವನ್ನು ರಾಜ್ಯ ಸರಕಾರ ಮಾಡಬೇಕು. ಅವರನ್ನು ಅಲ್ಲಿಂದ ತಪಾಸಣೆಗೊಳಪಡಿಸಿ, ಬಸ್ಸಿನಲ್ಲಿ ಬಂದಿಳಿದ ಬಳಿಕ ಅವರ ತಪಾಸಣೆ ನಡೆಸಿ ಕ್ವಾರಂಟೈನ್ನಲ್ಲಿಡುವ ಕಾರ್ಯವನ್ನೂ ಮಾಡಬಹುದು. ಅಧಿಕೃತವಾಗಿಯೇ ಅವರನ್ನು ನಿಯಮಾವಳಿ ಪಾಲಿಸಿ ಊರಿಗೆ ಕರೆ ತರುವ ವ್ಯವಸ್ಥೆಯನ್ನು ಕಲ್ಪಿಸಬಹುದು ಎಂದು ರೈ ಸಲಹೆ ನೀಡಿದರು.