ಪುತ್ತೂರು: ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಿಂಹವನ ಎಂಬಲ್ಲಿ ನಡೆದಿದೆ.
ಸಿಂಹವನ ನಿವಾಸಿ ದಿ. ಶ್ರೀನಿವಾಸ್ ಎಂಬುವರ ಪತ್ನಿ ವಿನೋದಾ (52) ಆತ್ಮಹತ್ಯೆ ಮಾಡಿಕೊಂಡವರು ಎನ್ನಲಾಗಿದೆ. ವಿನೋದಾ ತನ್ನ ಮನೆಯಲ್ಲಿ ಪುತ್ರಿ ಹಾಗೂ ಅಳಿಯನ ಸಂಸಾರದ ಜತೆ ವಾಸವಾಗಿದ್ದರು. ಸೋಮವಾರ ರಾತ್ರಿ ಊಟ ಮಾಡಿ ಮಲಗಿದ್ದ ಅವರು, ಮಂಗಳವಾರ ಬೆಳಗ್ಗೆ ಮನೆಯೊಳಗಿನ ಜಗಲಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.
ವಿನೋದಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ನೋಟ್ ಬರೆದಿಟ್ಟಿದ್ದು, ಅದರಲ್ಲಿ`ನನ್ನ ಸಮಸ್ಯೆಯನ್ನು ಮೂರು ಮಂದಿ ಸ್ನೇಹಿತರಿಗೆ ತಿಳಿಸಿದ್ದೇನೆ. ಮೈದುನನೇ ನನ್ನ ಅಂತ್ಯ ಸಂಸ್ಕಾರ ಮಾಡಬೇಕು. ಮೈದುನನ ಮಕ್ಕಳೇ ಬಾಯಿಗೆ ನೀರು ಬಿಡಬೇಕು' ಎಂದು ಉಲ್ಲೇಖಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಮೃತರು ಪುತ್ತೂರಿನ ಕೆಮ್ಮಿಂಜೆ ಮೊಟ್ಟೆತಡ್ಕ ಅಂಗನವಾಡಿ ಶಾಲೆಯಲ್ಲಿ ಅಡುಗೆ ಕೆಲಸವನ್ನು ಕಳೆದ 15 ವರ್ಷಗಳಿಂದ ಮಾಡುತಿದ್ದರು ಎನ್ನಲಾಗಿದೆ. ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.